ಮಕ್ಕಳ ರೋಗಗಳು
	ಶೈಶವದ ವೈಶಿಷ್ಟ್ಯಗಳಾಗಿಯೇ ಕಂಡುಬರುವ ರೋಗಗಳು. ಆದರೆ ವಯಸ್ಕರನ್ನು ಪೀಡಿಸುವ ಅನೇಕ ರೋಗಗಳು ಮಕ್ಕಳಲ್ಲೂ ಕಂಡುಬರುವುದು ಅಪರೂಪವಲ್ಲ. ಅಂಥ ಸಂದರ್ಭಗಳಲ್ಲಿ ಮಕ್ಕಳಿಗೇ ವಿಶಿಷ್ಟವಾದ ಲಕ್ಷಣಗಳಿದ್ದು ಚಿಕಿತ್ಸಾಕ್ರಮಗಳು ಬೇರೆ ಆಗಿರುತ್ತವೆ. ಇಂಥವನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಔಷಧೋಪಚಾರಗಳಿಗಿಂತ ಚಿಕಿತ್ಸೆ ಮಾಡಬಹುದಾದ ರೋಗಗಳು ಮತ್ತು ಶಸ್ತ್ರಕ್ರಿಯೆ ಅಗತ್ಯವಾಗುವ ರೋಗಗಳು ಎಂದು ಎರಡು ಭಾಗಗಳಾಗಿ ಇವನ್ನು ವಿವರಿಸಿದೆ.

	ಶಿಶುವಿನ ಹೊಟ್ಟೆ ಶೂಲೆ: ಇದು ಸಾಧಾರಣವಾಗಿ ಮೂರು ತಿಂಗಳಿಗೂ ಕಡಿಮೆ ವಯಸ್ಸಿನ ಶಿಶುಗಳಲ್ಲಿ ಮೂರನೆಯ ಅಥವಾ ನಾಲ್ಕನೆಯ ವಾರದಲ್ಲಿ ಕಾಣಿಸಿಕೊಳ್ಳುತ್ತದೆ. ಮಗು ಕಾರಣವಿಲ್ಲದೆ ಬಹಳಹೊತ್ತು ಜೋರಾಗಿ ಆಳುತ್ತಲೇ ಇರುವುದು. ಮುಖ ಕೆಂಪಡರಿ ಕೈಕಾಲುಗಳನ್ನು ಹೊಟ್ಟೆಯ ಮೇಲೆಳೆದುಕೊಂಡು ಕೈಗಳನ್ನು ಬಲವಾಗಿ ಮುಷ್ಟಿ ಹಿಡಿದಿರುತ್ತದೆ. ಒಂದೆರಡು ತಾಸಿನ ಬಳಿಕ ಆಳು ತಾನೇ ತಾನಾಗಿ ನಿಲ್ಲುವುದೂ ಉಂಟು. ಹೊಟ್ಟೆ ಶೂಲೆ ಸಂಜೆ ಇಲ್ಲವೇ ಇರುಳು ಕಾಣಿಸಿಕೊಳ್ಳುವುದೇ ಹೆಚ್ಚು. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲಿಯ ತನಕ ತಿಳಿದು ಬಂದಿಲ್ಲ. ಮಗುವಿಗೆ ಹಾಲೂಡುವಾಗ ಅದು ಗಾಳಿ ನುಂಗುವುದರಿಂದ ಅಥವಾ ಹೊಟ್ಟೆಗೆ ಅವಶ್ಯವಾದುದಕ್ಕಿಂತ ಹೆಚ್ಚು ಆಹಾರ ಸೇರುವುದರಿಂದ ಹೀಗಾಗಬಹುದು. ಹಾಲಿನ ಒಗ್ಗಿದಿರುವಿಕೆಯಿಂದ ಈ ರೀತಿಯ ನೋವು ಬರಬಹುದೆಂದು ಹಲವರ ಅಭಿಪ್ರಾಯ. ಮಗುವಿಗೆ 3-4 ತಿಂಗಳು ತುಂಬಿದ ಮೇಲೆ ಈ ತೊಂದರೆ ತಾನಾಗಿಯೇ ನಿವಾರಣೆಯಾಗುತ್ತದೆ. 

	ಚಿಕಿತ್ಸೆ: ಮಗುವನ್ನು ಬೋರಲು ಮಲಗಿಸಿ ತೇಗುವಂತೆ ಮಾಡಬೇಕು. ಇದರಿಂದ ಹೊಟ್ಟೆಯೊಳಗೆ ಸೇರಿಕೊಂಡಿರಬಹುದಾದ ಗಾಳಿ ಹೊರಬಂದು ನೋವು ಕಡಿಮೆಯಾಗುತ್ತದೆ.

	ಅಸಪಾಕ ಅಥವಾ ಬಾಯಿಹುಣ್ಣು (ಥ್ರಶ್): ನವಜಾತ ಶಿಶುಗಳಲ್ಲೂ ಎಳೆ ಮಕ್ಕಳಲ್ಲೂ ಬಾಯಿಯೊಳಗೆ ಕಂಡುಬರುವ ಅಂಟುಜಾಡ್ಯ. ಇತರ ಲೋಳೆ ಪೊರೆಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಕ್ಯಾಂಡಿಡಾ ಅಲ್ಬಿಕಾನ್ಸ್ ಎನ್ನುವ ಒಂದು ವಿಧದ ಶಿಲೀಂಧ್ರದಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ತಾಯಿಯ ಯೋನಿದ್ವಾರದಲ್ಲಿ ಇವು ಇದ್ದರೆ ಜನನಕಾಲದಲ್ಲಿ ಶಿಶುವಿಗೆ ಸೋಂಕು ಉಂಟು ಮಾಡುತ್ತವೆ. ಹತ್ತುದಿನಗಳೊಳಗೆ ಶಿಶುವಿಗೆ ಬಾಯಿ ಹುಣ್ಣು ಉಂಟಾಗುವುದು. ಇದಲ್ಲದೆ, ಪೋಷಕಗಳ ಕೊರತೆ ಇರುವ ಮತ್ತು ನಿಮ್ನ ರೋಗ ನಿರೋಧಕ ಶಕ್ತಿ ಇರುವ ಮಕ್ಕಳಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತದೆ. ಜೀವಿ ನಿರೋಧಕಗಳನ್ನು ಅತಿಯಾಗಿ ದೀರ್ಘಕಾಲ ಬಳಸುವುದರಿಂದಲೂ ಉಂಟಾಗಬಹುದು. ಇದು ಬಾಯಿಯ ಲೋಳೆಪೊರೆಯಲ್ಲಿ ಬಿಳಿಯ ಹೆಕ್ಕಳಿಗಳಂತೆ ಗೋಚರಿಸುತ್ತದೆ. ಬರಿಗಣ್ಣಿಗೆ ಮೊಸರು ಅಂಟಿಕೊಂಡಿರುವಂತೆ ತೋರಿಬರುತ್ತದೆ. ಅಸಪಾಕವನ್ನು ಒರೆಸಿದರೆ ಅದು ಹರಡಿದ ತಳಭಾಗ ಕೆಂಪಡರಿ ರಕ್ತ ಒಸರುತ್ತದೆ. ಆದರೆ ಒಸರು ಮೆತ್ತಿಕೊಂಡಿದ್ದಲ್ಲಿ ಸುಲಭವಾಗಿ ಒರೆಸಬಹುದು. ಮಗುವಿಗೆ ಬಾಯಿಉರಿ ಇರುವುದರಿಂದ ಆಹಾರ ಸೇವಿಸುವುದು ಕಷ್ಟವಾಗುವುದು. ಕೆಲವೊಮ್ಮೆ ಈ ರೋಗ ಶ್ವಾಸನಾಳ, ಶ್ವಾಸಕೋಶಗಳಿಗೆ ವ್ಯಾಪಿಸಿದಾಗ ಕರುಳಿಗೆ ನ್ಯೂಮೋನಿಯ ಹರಡಿ ಅತಿಸಾರವೂ ಆಗಬಹುದು. ಇಂಥ ಸಂದರ್ಭಗಳಲ್ಲಿ ಮಗುವಿನ ಜೀವಕ್ಕೆ ಹಾನಿಯಾಗುವ ಸಂಭವವಿದೆ.

	ಬಾಯಿಹುಣ್ಣಿನ ಬಳಿತವನ್ನು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ಈ ಶಿಲೀಂಧ್ರಗಳನ್ನು ಪತ್ತೆ ಹಚ್ಚಬಹುದು. ಕೆಲವೊಮ್ಮೆ ಕೃಷಿ ಮಾಡಿಯೂ ಗುರುತಿಸಬಹುದು. ಜಿನಷಿಯನ್ ವಯೊಲೆಟ್ ಲೇಪನದಿಂದ ರೋಗವನ್ನು ಚಿಕಿತ್ಸಿಸಬಹುದು. ಆದರೆ ಈ ರೋಗಕ್ಕೆ ಕಾರಣವಾದ ಮೂಲ ಸ್ಥಿತಿಗಳನ್ನು ಹತೋಟಿಗೆ ತರುವುದು ಉತ್ತಮ. ಪೋಷಕಗಳ ಕೊರತೆ ನೀಗಿಸುವುದು, ಜೀವ ನಿರೋಧಗಳ ವೃಥಾ ಬಳಕೆ ನಿಲ್ಲಿಸುವುದು ಇತ್ಯಾದಿ.

	ಅತಿಸಾರ, ಅತಿಭೇದಿ: ದಿನದ ರೂಢಿಗಿಂತಲೂ ಹೆಚ್ಚು ಸಲ ತೆಳುವಾಗಿ ಮತ್ತು ಹೆಚ್ಚು ಬಾರಿ ಮಲವಿಸರ್ಜನೆಯಾಗುವುದಕ್ಕೆ ಅತಿಸಾರ ಎಂದು ಹೆಸರು. ಇದು ಸ್ವತಃ ಒಂದು ಖಾಯಿಲೆಯಲ್ಲ. ಹಲವಾರು ರೀತಿಯ ಖಾಯಿಲೆಗಳಲ್ಲಿ ತೋರಿಬರುವ ಒಂದು ಲಕ್ಷಣ.

	ನವಜಾತ ಶಿಶುಗಳು ಮೊದಲ ಮೂರು ದಿನ ಕಪ್ಪುಮಿಶ್ರಿತ ಹಸುರು ಬಣ್ಣದ ಸ್ವಲ್ಪ ಮೆದುವಾಗಿರುವ ಮಲವನ್ನು ವಿಸರ್ಜಿಸುತ್ತವೆ. ಮುಂದಿನ ನಾಲ್ಕೈದು ದಿನ ಅವು ತೆಳ್ಳಗೆ ಹಳದಿ ಬಣ್ಣಕ್ಕಿರುವ ಮಲವನ್ನು ದಿನಕ್ಕೆ 6 ರಿಂದ 8 ಬಾರಿಯಂತೆ ವಿಸರ್ಜಿಸುತ್ತವೆ. ಇದಕ್ಕೆ ಮಧ್ಯಕಾಲದ ಅತಿಸಾರ ಎಂದು ಹೆಸರು. ಭೇದಿಯಾದರೂ ಮಗು ಸರಿಯಾಗಿ ಹಾಲುಣ್ಣುತ್ತ ಗೆಲುವಿನಿಂದ ಇರುತ್ತದೆ. ಇದರ ಬಗ್ಗೆ ಆತಂಕಗೊಳ್ಳಬೇಕಾದ ಪ್ರಮೇಯವಿಲ್ಲ. ಎಂಟು ಒಂಬತ್ತು ದಿನಗಳ ಅನಂತರ ಮಲ ಗಟ್ಟಿಯಾಗುತ್ತದೆ.

	ಅತಿಸಾರ ಸೋಂಕು ರೋಗಗಳಿಂದ ಅಥವಾ ಇತರ ಕಾರಣಗಳಿಂದ ಉಂಟಾಗಬಹುದು. ಕರುಳಿನ ಉರಿಯೂತಕ್ಕೆ ಏಕಾಣುಜೀವಿ, ವೈರಸ್ ಅಥವಾ ಶಿಲೀಂಧ್ರ ಕಾರಣವಾಗಿರಬಹುದು. ಇದಲ್ಲದೆ ದೇಹದ ಬೇರೆ ಭಾಗಗಳ ಅಂದರೆ ಮೂತ್ರ ಜನಕಾಂಗ, ಶ್ವಾಸಕೋಶ, ಕಿವಿ ಇತ್ಯಾದಿಗಳ ಸೋಂಕು ರೋಗಗಳಲ್ಲೂ ಅತಿಸಾರ ತಲೆದೋರಬಹುದು.

	ರೋಗಲಕ್ಷಣಗಳು: ಅತಿಸಾರ ಬರೇ ನೀರಿನಂತೆ ಇರಬಹುದು. ಇಲ್ಲವೇ ಲೋಳೆಯಿಂದ ಕೂಡಿರಬಹುದು. ಕೆಲವೊಮ್ಮೆ ರಕ್ತ ಮತ್ತು ಶ್ಲೇಷ್ಮಗಳು ಮಲದಲ್ಲಿ ಇರುತ್ತವೆ. ಇದರಿಂದ ಮಗುವಿಗೆ ಹೊಟ್ಟೆಶೂಲೆ ಜ್ವರ ಬರುವುದೂ ಉಂಟು. ಹೆಚ್ಚಿನ ವೇಳೆವಾಂತಿ ಇರುವುದು. ಅತಿಸಾರದಿಂದ ನಿರ್ಜಲತೆ ಮತ್ತು ಎಲೆಕ್ಟ್ರೊಲೈಟುಗಳ ಅಸಮತೋಲನ ಉಂಟಾಗುತ್ತದೆ. ಕೆಲವು ಲಕ್ಷಣಗಳಿವು: ಹೆಚ್ಚಿನದಾಹ, ಜ್ವರ, ಕಿರಿಕಿರಿ, ಹೆಚ್ಚಾಗಿ ಅಳುವುದು ಮತ್ತು ಕ್ರಮೇಣ ನಿರ್ಜಲತೆ ಜಾಸ್ತಿಯಾದಂತೆ ಮಗು ಬಸವಳಿದು ಅಳಲು ಶಕ್ತಿಯಿಲ್ಲದಂತೆ ಆಗುವುದು, ಮೂತ್ರ ಪ್ರಮಾಣ ಕಡಿಮೆಯಗುವುದು. ಹೊಟ್ಟೆಉಬ್ಬರ, ಕೆಲವೊಮ್ಮೆ ಸೆಳವು ಬಂದು ಮಗು e್ಞÁನ ಕಳೆದುಕೊಳ್ಳುವುದು ಇತ್ಯಾದಿ. ಚರ್ಮ ತಣ್ಣಗಾಗಿ ನಾಡಿ ಸಿಗುವುದಿಲ್ಲ. ರಕ್ತಪರಿಚಲನಾಘಾತ ಉಂಟಾಗುತ್ತದೆ. ಅಂತಿಮ ಘಟ್ಟದಲ್ಲಿ ಮೂತ್ರಪಿಂಡಗಳು ವಿಫಲವಾಗಿ ಮರಣಸಂಭವಿಸುತ್ತದೆ.

	ಚಿಕಿತ್ಸೆ: ಅತಿಸಾರವನ್ನು ಪ್ರಾರಂಭದಲೇ ಚಿಕಿತ್ಸೆ ಮಾಡಿ ಅದರಿದುಂಟಾಗುವ ಅನೇಕ ಉಪದ್ರವಗಳನ್ನು ತಡೆಗಟ್ಟಬಹುದು. ನೀರು ಮತ್ತು ಲವಣ ಮಿಶ್ರಣವನ್ನು ಬಾಯಿಯಿಂದ ನೀಡಬೇಕು. ಇದರಲ್ಲಿ ಗ್ಲೂಕೋಸಿನ ಅಂಶವಿದ್ದರೆ ಲವಣಗಳ ಹೀರುವಿಕೆ ಸುಲಭವಾಗುವುದು. ನಿರ್ಜಲತೆಯೂ ಅಷ್ಟೇನೂ ತೀವ್ರವಾಗಿರದಿದ್ದಲ್ಲಿ ಅಥವಾ ಮಧ್ಯಸ್ಥವಾಗಿದ್ದಲ್ಲಿ ಈ ಮಿಶ್ರಣವನ್ನು ಬಾಯಿಯ ಮೂಲಕ ನೀಡಬಹುದು. ವಿಶ್ವಆರೋಗ್ಯ ಸಂಸ್ಥೆ ಈ ತರಹದ ಚಿಕಿತ್ಸೆಗಾಗಿ ನೀರು, ಗ್ಲೂಕೋಸ್ ಮತ್ತು ಎಲೆಕ್ಟ್ರೊಲೈಟುಗಳು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆತಿರುವ ಒಂದು ಮಿಶ್ರಣವನ್ನು ಶಿಫಾರಸ್ಸು ಮಾಡಿದೆ. ಇದು ಈಗ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿದೆ. 

	ವಾಂತಿ ತೀವ್ರವಾಗಿದ್ದಲ್ಲಿ ಈ ಮಿಶ್ರಣವನ್ನು ಕೊಡಲಾಗುವುದಿಲ.್ಲ ಈ ಸಂದರ್ಭದಲ್ಲಿ ಅಥವಾ ಅತಿ ತೀವ್ರ ನಿರ್ಜಲತೆಯಿದ್ದು ರೋಗಿಯ ಸ್ಥಿತಿ ಚಿಂತಾಜನಕವಾಗಿದ್ದಲ್ಲಿ ಗ್ಲೂಕೋಸ್ ನೀರು ಮತ್ತು ಎಲೆಕ್ಟ್ರೊಲೈಟುಗಳನ್ನು ನೇರವಾಗಿ ರಕ್ತನಾಳಗಳ ಮೂಲಕ ಕೊಡಬೇಕಾಗುತ್ತದೆ.

	ಆಹಾರ ಪಥ್ಯ: ಸೇಬುಹಣ್ಣಿನರಸ, ಕಳಿದ ಬಾಳೆಹಣ್ಣು, ಚಹಾ, ಸಬ್ಬಕ್ಕಿ ಗಂಜಿ ಅರೊರೂಟ್ ಗಂಜಿ, ಆಮ್ಲೀಕರಿಸಿದ ಹಾಲು ಮಜ್ಜಿಗೆ ಅನ್ನ ಇತ್ಯಾದಿಗಳನ್ನು ನಿಯಮಿತವಾಗಿ ನೀಡಬಹುದು. ಮಗು ಎದೆಹಾಲು ಉಣ್ಣುತ್ತಿದ್ದಲ್ಲಿ ಅದನ್ನು ಮುಂದುವರಿಸಬೇಕು.

	ಅತಿಸಾರದ ಹತೋಟಿಯಲ್ಲಿ ಔಷಧಿಗಳ ಪಾತ್ರ ಕಡಿಮೆ. ಆದರೆ ಸೋಂಕು ರೋಗದಿಂದ ಉಂಟಾಗುವ ಅತಿಸಾರಕ್ಕೆ ಜೀವಿ ನಿರೋಧಕಗಳ ಬಳಕೆ ಅವಶ್ಯವಾಗಬಹುದು. ಸ್ಟ್ರೆಪ್ಟೊಮೈಸಿನ್, ನಿಯೊಮೈಸಿನ್, ಫ್ಯೂರಜೋಲಿಡೋನ್ ಮುಂತಾದ ಔಷಧಿಗಳ ಬಳಕೆ ಇದೆ.

	ದಡಾರ: ಪ್ರಬಲ ಸೋಂಕುರೋಗ. ಇದು ಪ್ಯಾರಾಮಿಕ್ಸೋ ವೈರಸ್ ಎಂಬ ಜಾತಿಯ ಸೂಕ್ಷ್ಮಾಣುಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಉಷ್ಣವಲಯ ಪ್ರದೇಶಗಳಲ್ಲಿ ಜಾಸ್ತಿ. ಅಭಿವೃದ್ಧಿಶೀಲ ದೇಶಗಳಲ್ಲಿ ಇದೊಂದು ಮುಖ್ಯ ಆರೋಗ್ಯ ಸಮಸ್ಯೆ.

	ಪ್ರತಿಶತ ತೊಂಬತ್ತೈದರಷ್ಟು ರೋಗಿಗಳು 15 ವರ್ಷಕ್ಕಿಂತ ಕೆಳಗಿನ ವಯೋಮಾನದವರು. ಆದರೆ ಎಳೆಮಕ್ಕಳಲ್ಲಿಯೂ ಇದು ತೋರಿಬರಬಹುದು. ಸಾಮಾನ್ಯವಾಗಿ ವಯಸ್ಸು ಸುಮಾರು 6 ತಿಂಗಳತನಕದ ಶಿಶುಗಳು ತಾಯಿಯಿಂದ ಬರುವ ರಕ್ಷಣೆಯ ಅಂಶದಿಂದಾಗಿ ಈ ರೋಗ ಪೀಡಿತವಾಗುವುದು ವಿರಳ. ಖಾಯಿಲೆಯ ತೀವ್ರತೆ ಎಳೆ ಮಕ್ಕಳಲ್ಲಿ (5 ವರ್ಷಕ್ಕಿಂತ ಕೆಳಗಿನ) ಅಂತೆಯೇ ಪೋಷಕಗಳ ಕೊರತೆಯುಳ್ಳ ಮಕ್ಕಳಲ್ಲಿ ಅಧಿಕ.

	ರೋಗ ಲಕ್ಷಣಗಳು: ರೋಗ ಕ್ರಿಮಿಗಳು ರೋಗಿಯ ಬಾಯಿ, ಮೂಗು ಮತ್ತು ಶ್ವಾಸಕೋಶಗಳಿಂದ ಸುರಿಯುವ ಸ್ರಾವಗಳಲ್ಲಿ ಇರುತ್ತವೆ. ರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ಕ್ರಿಮಿಗಳು ಗಾಳಿಯಲ್ಲಿ ಹರಡಿ ಇನ್ನೊಬ್ಬನ ಮೂಗು ಸೇರುತ್ತವೆ. 9-15 ದಿನಗಳ ತರುವಾಯ ರೋಗ ಲಕ್ಷಣಗಳು ತೋರಿ ಬರುತ್ತವೆ. 

	ಆರಂಭಿಕ ಹಂತದಲ್ಲಿ ಜ್ವರ, ಕೆಮ್ಮು, ಮೂಗು ಸೋರುವುದು, ಕಣ್ಣುಬೇನೆ, ಮೈ ಕೈ ನೋವು ಇತ್ಯಾದಿ ಪ್ರಕಟವಾಗುತ್ತವೆ. ಜ್ವರ ಸುಮಾರಾಗಿ ತೀವ್ರವಾಗಿಯೇ ಇದ್ದು ಎಳೆ ಮಕ್ಕಳಲ್ಲಿ ಸೆಳವು ಕಾಣಿಸಿಕೊಳ್ಳಬಹುದು. 2-3 ದಿನಗಳ ಬಳಿಕ ಬಾಯಿಯ ಲೋಳೆಪೊರೆ ಮೇಲೆ ಸಣ್ಣ ಚುಕ್ಕಿಗಳು ತೋರಿಬರುತ್ತವೆ. ಇವು ಬಿಳಿ ಮರಳಿನಂತಿದು ಸುತ್ತಲಿನ ಜಾಗ ಕೆಂಪಾಗಿರುತ್ತದೆ. ಇವುಗಳಿಗೆ ಕೋಪ್ಲಿಕ್ಸ್ ಚುಕ್ಕೆ ಎಂದು ಹೆಸರು.

	ಇದಾದ 2-3 ದಿನಗಳ ಬಳಿಕ ದಡಾರದ ಗಂಧೆಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿ ಕಿವಿಯ ಹಿಂಭಾಗ, ಮುಖ, ಕತ್ತಿನ ಭಾಗದಲ್ಲಿ ಕಾಣಿಸಿಕೊಂಡು ಮುಂದೆ 1-2 ದಿನಗಳಲ್ಲಿ ಇಡೀ ದೇಹಕ್ಕೆ ಹರಡುವುದು. ಈ ಚುಕ್ಕಿಗಳು ಸಣ್ಣಗೆ ಕೆಂಪಾಗಿದ್ದು ಇವುಗಳಲ್ಲಿ ಯಾವುದೇ ದ್ರವ ಇರುವುದಿಲ್ಲ. ಇವು ತೋರಿದ 2ನೆಯ ದಿನ ಜ್ವರದ ತೀವ್ರತೆ ಕಡಿಮೆಯಾಗುವುದು. 4-5 ದಿನಗಳಲ್ಲಿ ಈ ಗಂಧೆಗಳು ಇಂಗಿಹೋಗಿ ಚರ್ಮ ಸುಲಿಯಲಾರಂಭಿಸುತ್ತದೆ. ಕೊನೆಗೆ ಚರ್ಮ ತಾಮ್ರ ಕಂದು ಬಣ್ಣ ತಳೆಯುತ್ತದೆ. ಕ್ರಮೇಣ ಇದು ಮಾಯವಾಗುವುದು.

	ರೋಗ ಚಿಕಿತ್ಸೆ: ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಔಷಧಿಯಿಲ್ಲ. ಆರಂಭಿಕ ಹಂತದಲ್ಲಿ ರೋಗಿಯನ್ನು ಬೇರೆ ಮಕ್ಕಳಿಂದ ಪ್ರತ್ಯೇಕವಾಗಿಡಬೇಕು. ಯೋಗ್ಯ ಶುಶ್ರೂಷೆ ಮುಖ್ಯ. ಉತ್ತಮ ಆಹಾರ, ಗಾಳಿ, ಬೆಳಕು ಮತ್ತು ಜ್ವರ ಉಪಶಮನದ ಔಷಧಿಗಳು ಮುಂತಾದವು ಅಗತ್ಯ. ಯಾವುದೇ ಆಹಾರ ಪಥ್ಯವಿಲ್ಲ.

	ಧನುರ್ವಾಯು: ಇದು ಕ್ಲಾಸ್ಟ್ರಿಡಿಯಮ್ ಟೆಟನೈ ಎನ್ನುವ ಸೂಕ್ಷ್ಮಾಣುಗಳಿಂದ ಉಂಟಾಗುವ ಸೋಂಕು ರೋಗ. ಇದರ ಅಣುಗಳು ಟೆಟಾನೊ ಸ್ಪಾಸ್ಮಿನ್ ಎಂಬ ವಿಷವನ್ನು ಉತ್ಪಾದಿಸುತ್ತವೆ. ಇದು ನರ ಅಂಗಾಂಶವನ್ನು ಸೇರಿ ರೋಗ ಲಕ್ಷಣಗಳಿಗೆ ಕಾರಣವಾಗುತ್ತದೆ. ಸ್ನಾಯುಗಳ ಸೆಳೆತ ಮುಖ್ಯ ಲಕ್ಷಣ. ಈ ರೋಗಾಣುಗಳು ಮಣ್ಣು, ದೂಳು, ಸಗಣಿ ಇತ್ಯಾದಿಗಳಲ್ಲಿ ಇರುವುವು. ಇವು ದೊಡ್ಡ ಇಲ್ಲವೇ ಸೂಕ್ಷ್ಮಗಾಯಗಳ ಮೂಲಕ ದೇಹ ಸೇರುತ್ತವೆ. ಗಾಯ ಕೊಳೆಯಿಂದ ತುಂಬಿಕೊಂಡಿದ್ದರೆ ಅಲ್ಲಿ ರೋಗಾಣುಗಳು ಅತಿ ವೇಗವಾಗಿ ವೃದ್ಧಿಹೊಂದುತ್ತವೆ. ಕೆಲವೊಮ್ಮೆ ರೋಗಕ್ರಿಮಿಗಳು ಕಿವಿಗಳ ಮೂಲಕ (ಕಿವಿ ಸೋರುವಿಕೆ ಇದ್ದರೆ) ದೇಹವನ್ನು ಸೇರುತ್ತವೆ. ನವಜಾತ ಶಿಶುಗಳಲ್ಲಿ ಹೊಕ್ಕಳ ಬಳ್ಳಿಯ ಮೂಲಕ ಸೋಂಕು ತಗಲಬಹುದು. ಬಳ್ಳಿ ಕತ್ತರಿಸಲು ಕೊಳಕು ಕತ್ತರಿ ಇಲ್ಲವೇ ಅಲಗು ಉಪಯೋಗಿಸಿದಾಗ ಅಥವಾ ಹೊಕ್ಕಳ ಬಳ್ಳಿಗೆ ಸಗಣಿ, ಮಣ್ಣು ಇತ್ಯಾದಿಗಳನ್ನು ಸವರಿದಾಗ ಈ ರೋಗ ಬರಬಹುದಾದ ಸಾಧ್ಯತೆ ಹೆಚ್ಚು.

	ರೋಗ ಲಕ್ಷಣಗಳು: ರೋಗಾಣುಗಳು ದೇಹ ಸೇರಿದ 4-14 ದಿನಗಳಲ್ಲಿ ಲಕ್ಷಣಗಳು ಪ್ರಕಟವಾಗುತ್ತವೆ. ದವಡೆಯ ಸ್ನಾಯುಗಳ ಸೆಳವಿನಿಂದ ಬಾಯಿ ತೆರೆಯಲು ಕಷ್ಟವಾಗುವುದು. ಇದು ಮೊದಲ ಲಕ್ಷಣ. ಎಳೆ ಮಗುವಿಗೆ ಇದರಿಂದ ಹಾಲು ಉಣಲು ಕಷ್ಟವಾಗುತ್ತದೆ. ದೊಡ್ಡ ಮಕ್ಕಳಿಗೆ ಆಹಾರ ನುಂಗಲು ಅಸಾಧ್ಯವಾಗಬಹುದು. ಕ್ರಮೇಣ ಸ್ನಾಯುಸೆಡವು ಕತ್ತು, ಎದೆಗೂಡು, ಬೆನ್ನುಮೂಳೆ, ಉದರ ಮತ್ತು ದೇಹದ ಇತರ ಸ್ನಾಯುಗಳಿಗೆ ಹರಡುತ್ತದೆ. ಈ ತರದ ಸೆಡವು ಆಗಿಂದಾಗ ಮರುಕಳಿಸುತ್ತಿರುವುದು. ಗಾಳಿಯ ಚಲನೆ, ಸಪ್ಪಳ, ಬೆಳಕು, ಮೈಚುಚ್ಚುವಿಕೆ ಇತ್ಯಾದಿಗಳಿಂದ ಈ ಸೆಡವು ಹರಡುತ್ತದೆ. ಕ್ರಮೇಣ ಬೆನ್ನಿನ, ಎದೆಯ ಮತ್ತು ಹೊಟ್ಟೆಯ ಸ್ನಾಯುಗಳ ಸೆಡೆತದಿಂದ ದೇಹ ಬಿಲ್ಲಿನಾಕಾರವಾಗಿ ಬಗ್ಗುತ್ತದೆ. ಮುಖದ ಸ್ನಾಯುಗಳು ಬಿಗಿದುಕೊಂಡಿದ್ದು ರೋಗಿ ನೋವು ಅನುಭವಿಸುತ್ತಿದ್ದರೂ ವ್ಯಂಗ್ಯವಾಗಿ ನಗುತ್ತಿರುವಂತೆ ತೋರುತ್ತದೆ. e್ಞÁನ ತಪ್ಪಿರುವುದಿಲ್ಲ. ಜ್ವರ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ದೇಹದ ಉಷ್ಣತೆ ಬಹಳ ಹೆಚ್ಚಿದರೂ ಅಥವಾ ಮಾಮೂಲಿಗಿಂತ ಕಡಿಮೆಯಾದರೂ ಅದು ಬಹಳ ನಿರಾಶಾದಾಯಕ ಚಿಹ್ನೆ. ನವಜಾತ ಶಿಶುಗಳಲ್ಲಿ ಸೆಳೆತ ಜಾಸ್ತಿಯಾಗಿದ್ದು ಬಹುತೇಕ ಸಾವು ಉಂಟಾಗುತ್ತದೆ. ಈ ರೋಗದಲ್ಲಿ ಉಸಿರಾಟದ ತೊಂದರೆಯೇ ಸಾವಿನ ಕಾರಣ.

	ಚಿಕಿತ್ಸೆ: ರೋಗಿಯನ್ನು ಪ್ರತ್ಯೇಕ ಶಬ್ದರಹಿತ ಕತ್ತಲೆ ಕೋಣೆಯಲ್ಲಿ ಮಲಗಿಸಬೇಕು. ಆತನನ್ನು ನೋಡಬರುವವರ ಸಂಖ್ಯೆ ಕಡಿಮೆಯಿದ್ದಷ್ಟೂ ಉತ್ತಮ. ಸ್ನಾಯು ಎಳೆತಗಳನ್ನು ಹತೋಟಿಗೆ ತರಲು ನಿದ್ರಾಜನಕ ಔಷಧಿ, ಸ್ನಾಯು ಸಡಿಲಗೊಳಿಸುವ ಔಷಧಿ ಮುಂತಾದವನ್ನು ಬಳಸಬಹುದು. ಡಯೋಜಿಪಾಮ್, ಕ್ಲೋರ್‍ಪ್ರಾಮಜಿನ್ ಪ್ಯಾರಾಲ್ಡಿಹೈಡ್ ಇತ್ಯಾದಿಗಳನ್ನು ನಿಯಮಿತವಾಗಿ ಬಳಸಬೇಕು.

	ರೋಗಿಗೆ ಉಸಿರಾಟದ ಅಡಚಣೆಯಿದ್ದರೆ ಶ್ವಾಸನಾಳ ಛೇದನಮಾಡಿ ಅದರಲ್ಲಿ ನಳಿಕೆ ಇಡಬಹುದು. ಕೆಲವೊಮ್ಮೆ ಕೃತಕ ಉಸಿರಾಟದ ಅವಶ್ಯಕತೆಯೂ ಉಂಟಾಗಬಹುದು. ಚಿಕಿತ್ಸೆಗಳಲ್ಲಿ ಒಂದು ಮುಖ್ಯ ಅಂಶವೆಂದರೆ ರೋಗಿಯ ಪೋಷಣೆ. ಪೋಷಕಗಳನ್ನು ರಕ್ತನಾಳದ ಅಥವಾ ಜಠರ ನಳಿಕೆಗಳ ಮೂಲಕ ನೀಡಬೇಕಾಗುತ್ತದೆ. ಧನುರ್ವಾಯುನಿರೋಧಕ ರಕ್ತಸಾರವನ್ನು ಬಳಸಬೇಕು. ದೇಹದ ಯಾವುದೇ ಭಾಗದಲ್ಲಿ ಗಾಯವಿದ್ದರೆ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ದಿನಕ್ಕೆ ಒಂದು ಬಾರಿಯಂತೆ ಪೆನಿಸಿಲಿನ್ ಚುಚ್ಚುಮದ್ದನ್ನು ಹತ್ತುದಿನ ನೀಡಬೇಕು.

	ಧನುರ್ವಾಯು ನಿರೋಧಕ ವಿಧಾನಗಳು: ಗರ್ಭಿಣಿಯರಿಗೆ 6, 7 ಮತ್ತು 8ನೆಯ ತಿಂಗಳುಗಳಲ್ಲಿ ಧನುರ್ವಾಯು ಟಾಕ್ಸಾಯಿಡ್ ನೀಡುವುದರ ಮೂಲಕ ನವಜಾತ ಶಿಶುಗಳಲ್ಲಿ ಈ ರೋಗ ತಡೆಯಬಹುದು. ಎಳೆ ಮಕ್ಕಳಿಗೆ 3, 4 ಮತ್ತು 5 ನೆಯ ತಿಂಗಳುಗಳಲ್ಲಿ ಟ್ರಿಪಲ್‍ಆ್ಯಂಟಿಜನ್ ಚುಚ್ಚುಮದ್ದನ್ನು ನೀಡಬೇಕು. ಒಂದೂವರೆ ವರ್ಷ ಪ್ರಾಯದಲ್ಲಿ ಪುನಃ ಇದನ್ನು ನೀಡಬೇಕು. 5ನೆಯ ಮತ್ತು 10ನೆಯ ವರ್ಷಗಳಲ್ಲಿ ಧನುರ್ವಾಯು ಮತ್ತು ಡಿಫ್ತೀರಿಯಾ ಕೂಡಿದಂಥ ಟಾಕ್ಸಾಯಿಡನ್ನು ಕೊಡಬೇಕು.

	ಯಾವುದೇ ಮಗುವಿಗೆ ಗಾಯವುಂಟಾಗಿ ಅದಕ್ಕೆ ಬಾಲ್ಯದಲ್ಲಿ ಟ್ರಿಪಲ್‍ಆ್ಯಂಟಿಜನ್ ಕೊಟ್ಟಿರದಿದ್ದರೆ 250-500 ಅಂತಾರಾಷ್ಟ್ರೀಯ ಏಕಮಾನ (IU) ಧನುರ್ವಾಯು ನಿರೋಧಕ ರಕ್ತಸಾರ ಕೊಡಬೇಕು. ಇದು ಸಿಗದಿದ್ದರೆ ಧನುರ್ವಾಯು ವಿಷಾಹಾರಿ ರಕ್ತಸಾರವನ್ನು 3000-5000 IU ಗಳಷ್ಟು ಕೊಡಬೇಕು. 

ಎಳವು, ಸೆಳವು: e್ಞÁನ ತಪ್ಪಿ ಅಥವಾ ತಪ್ಪದೆ ಅನೈಚ್ಛಿಕವಾಗಿ ಅನುಕ್ರಮವಾಗಿ 	ಬರುವ ಸ್ನಾಯುಗಳ ಎಳೆತವೇ ಸೆಳವು. ಸ್ವತಃ ಇದೊಂದು ಖಾಯಿಲೆ ಅಲ್ಲ. ವಿಭಿನ್ನ ವಯಸ್ಸಿನ ಮಕ್ಕಳಲ್ಲಿ ವಿಭಿನ್ನ ಖಾಯಿಲೆಗಳನ್ನು ಸೂಚಿಸುವ ಒಂದು ಚಿಹ್ನೆ. ಪ್ರತಿಶತ 5ರಷ್ಟು ಮಕ್ಕಳು ತಮ್ಮ ಜೀವಿತದಲ್ಲಿ ಒಂದು ಬಾರಿಯಾದರೂ ಈ ರೋಗಕ್ಕೆ ಈಡಾಗಿರುತ್ತಾರೆ.

ಕಾರಣಗಳು: ಹುಟ್ಟಿದ ತಿಂಗಳೊಳಗೆ ಕಾಣಬರುವ ಸೆಳವಿಗೆ ಹೆರಿಗೆ ಸಮಯದಲ್ಲಿ ಅಥವಾ ಇನ್ನಿತರ ಸಂದರ್ಭಗಳಲ್ಲಿ ಮಿದುಳಿಗೆ ಗಾಸಿ. ಅಲ್ಲಿ ರಕ್ತಸ್ರಾವ, ಸೋಂಕು ಇಲ್ಲವೇ ಉರಿಊತ ಸಾಮಾನ್ಯ ಕಾರಣಗಳು. ಕೇವಲ ಆಕ್ಸಿಜನ್ ಕೊರತೆ ಕಾರಣದಿಂದಲೂ ಸೆಳವು ಬರುವುದಿದೆ. ಮೂರು ತಿಂಗಳಾದ ಮಕ್ಕಳಲ್ಲಿ ಈ ಕಾರಣಗಳ ಜೊತೆಗೆ ಕ್ಯಾಲ್ಸಿಯಮ್ ಮತ್ತು ಮ್ಯಾಗ್ನಿಸಿಯಮ್ ಲವಣಗಳ ಕೊರತೆಯೇ ಸೆಳವಿಗೆ ಕಾರಣವಾಗುತ್ತದೆ. ಇನ್ನೂ ಬೆಳೆದ ಮಕ್ಕಳಲ್ಲಿ 5 ವರ್ಷದ ತನಕವೂ ಜ್ವರಾಧಿಕ್ಯ, ಡಿ ಜೀವಸತ್ತ್ವದ ಕೊರತೆ ಮತ್ತು ಮಿದುಳಿನ ಉರಿಊತ ಸೋಂಕುಗಳೂ 5 ವರ್ಷ ಮೀರಿದ ಮಕ್ಕಳಲ್ಲಿ ಅಪಸ್ಮಾರವೂ ಕಾರಣವಾಗಿರುವುದುಂಟು.

ಲಕ್ಷಣಗಳು: ಸೆಳವು ಬಂದಾಗ ಮಗುವಿನ ಕೈಕಾಲುಗಳು ಪದೇ ಪದೇ ಎಳೆತಕ್ಕೆ ಒಳಗಾಗುತ್ತವೆ. ಮಗು ಸೆಟೆದುಕೊಳ್ಳುತ್ತದೆ. ಕಣ್ಣು ಮೇಲಕ್ಕೆ ತೇಲುವುದು, ಬಾಯಲ್ಲಿ ನೊರೆ ಬರುವುದು ಇತ್ಯಾದಿ ಸೆಳೆತದೊಂದಿಗೆ ಉಂಟಾಗುವುವು. ಕೆಲವೊಮ್ಮೆ ಮಲಮೂತ್ರ ವಿಸರ್ಜನೆಯಾಗುವುದೂ ಉಂಟು. ಸಾಮಾನ್ಯವಾಗಿ ಸೆಳವಿದ್ದಾಗ ಮಗುವಿಗೆ e್ಞÁನ ತಪ್ಪಿರುವುದು.

ಚಿಕಿತ್ಸೆ: ಸೆಳವು ಕಂಡುಬಂದಾಗ ಒಡನೆ ಈ ಮುಂದಿನ ಪ್ರಥಮ ಚಿಕಿತ್ಸೆ ಒದಗಿಸಬೇಕು: ಮಗುವನ್ನು ತತ್‍ಕ್ಷಣವೇ ಒಂದು ಪಾಶ್ರ್ವಕ್ಕೆ ತಿರುಗಿಸಬೇಕು. ಹಲ್ಲು ಮೂಡಿರುವ ಮಕ್ಕಳ ಬಾಯಲ್ಲಿ ಮಡಿಕೆ ಮಾಡಿದ ಚೌಕ ಇಡಬೇಕು. ಇದರಿಂದಾಗಿ ಮಗುನಾಲಗೆಯನ್ನು ಕಚ್ಚಿಗಾಯಮಾಡಿಕೊಳ್ಳುವುದು ತಪ್ಪುತ್ತದೆ ಉಡುಪನ್ನು ಸಡಿಲಗೊಳಿಸಬೇಕು. ಬಾಯೊಳಗೆ ಬೆರಳಿಡುವುದು ಕ್ಷೇಮಕರವಲ್ಲ. ಮಗುವಿಗೆ ಗಾಸಿಯಾಗದಂತೆ ತೊಟ್ಟಿಲು ಅಥವಾ ಮಂಚದ ಒಳಭಾಗದಲ್ಲಿ ನಾಲ್ಕೂ ಕಡೆ ಮೆತ್ತಗಿರುವ ಬಟ್ಟೆ ಇಡಬೇಕು. ಮಗುವನ್ನು ವೈದ್ಯರಿಗೆ ತೋರಿಸಿ ಅವರ ಸಲಹೆ ಪಡೆಯಬೇಕು.

ಮಕ್ಕಳ ಲಕ್ವ ಖಾಯಿಲೆ (ಪೋಲಿಯೊ): ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಒಂದು ವೈರಸಿನಿಂದ ಉಂಟಾಗುವ ಸೋಂಕು ರೋಗ. ಮೊದಲಿಗೆ ಕರುಳನ್ನು ಆಕ್ರಮಿಸಿ ಅಲ್ಲಿ ಸೋಂಕು ಉಂಟುಮಾಡುವುದಾದರೂ ಇದರ ಮುಖ್ಯ ಪರಿಣಾಮವುಂಟಾಗುವುದು ನರಮಂಡಲದ ಮೇಲೆ. ಅಲ್ಲಿ ಇದು ತಾತ್ಕಾಲಿಕ ಅಥವಾ ಶಾಶ್ವತ ಬದಲಾವಣೆಗಳನ್ನು ಉಂಟುಮಾಡಬಹುದು. ಇದು ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಕಂಡುಬರುತ್ತದೆ. ಆದರೆ ಉಷ್ಣವಲಯದ ಹಿಂದುಳಿದ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಇದರ ಪೀಡೆ ಹೆಚ್ಚು. ಪಾಶ್ಚಾತ್ಯ ದೇಶಗಳಲ್ಲಿ ಶೈಶವ್ಯದಲ್ಲೇ ಪೋಲಿಯೊ ಲಸಿಕೆಯನ್ನು ಕೊಡುವುದರಿಂದ ಅಲ್ಲಿ ಈ ರೋಗದ ಸಮಸ್ಯೆ ಬಲುಮಟ್ಟಿಗೆ ಪರಿಹಾರವಾಗಿದೆ.
ಪೋಲಿಯೊ ವೈರಸಿನಲ್ಲಿ ಮೂರು ಬಗೆಗಳಿವೆ. ಸಾಮಾನ್ಯವಾಗಿ ಕಾಣಬರುವ ಮತ್ತು ಲಕ್ವಕ್ಕೆ ಕಾರಣವಾಗುವ ಪೋಲಿಯೊ ಖಾಯಿಲೆ ಒಂದನೆಯ ನಮೂನೆಯಿಂದ ಉಂಟಾಗುತ್ತದೆ.

ಪೋಲಿಯೊ ಕ್ರಿಮಿಗಳು ಕಲುಷಿತ ನೀರು ಅಥವಾ ಆಹಾರದ ಮೂಲಕ ಮಾನವ ದೇಹ ಸೇರಿ ಕರುಳಿನಲ್ಲಿ ವೃದ್ಧಿಯಾಗಿ ದುಗ್ಧ ಗ್ರಂಥಿಗಳು ಮತ್ತು ರಕ್ತದ ಮೂಲಕ ದೇಹದ ಇನ್ನಿತರ ಅಂಗಗಳಿಗೆ ಹರಡುತ್ತವೆ. ಆದರೆ ಇವುಗಳ ಆಕ್ರಮಣ ಗುರಿ ಮುಖ್ಯವಾಗಿ ನರಮಂಡಲ. ಇತ್ತ ಕ್ರಿಮಿಗಳು ಕರುಳಿನಿಂದ ಮಲದಲ್ಲಿ ಸುಮಾರು ಕಾಲ ವಿಸರ್ಜನೆಗೊಳ್ಳುತ್ತ ಇರುತ್ತವೆ. ಇವು ಕಲುಷಿತ ನೀರು ಮತ್ತು ಆಹಾರದ ಮೂಲಕ ಇನ್ನೊಬ್ಬನ ದೇಹವನ್ನು ಸೇರಬಹುದು.

ಈ ಕ್ರಿಮಿಗಳಿಂದಾಗಿ ರಕ್ತದ ಸೋಂಕು ಉಂಟಾಗಿ ಮಗುವಿಗೆ ಜ್ವರ, ಹಸಿವಿಲ್ಲದಿರುವಿಕೆ, ವಾಕರಿಕೆ, ತಲೆನೋವು ಮತ್ತು ಭೇದಿ ಉಂಟಾಗಬಹುದು. ಆದರೆ ಇವು ಅಷ್ಟೇನೂ ತೀವ್ರತರವಾಗಿರುವುದಿಲ್ಲ. ಇದು ಪೋಲಿಯೋದ ಲಘು ರೋಗ. ಒಮ್ಮೊಮ್ಮೆ ತೀವ್ರತರ ಖಾಯಿಲೆ ಉಂಟಾಗಬಹುದು. ಇದು ತೀವ್ರ ರೋಗ. ಪೋಲಿಯೊ ಲಸಿಕೆ ಸೋಂಕಿದ ಮಕ್ಕಳಿಗೆ ಜ್ವರಬಂದ 2-3 ದಿನಗಳಲ್ಲಿ ಸ್ನಾಯುಗಳಿಗೆ ಯಾವುದೇ ಚುಚ್ಚು ಮದ್ದು ಕೊಟ್ಟರೂ ಲಕ್ವ ಹೊಡೆಯುವ ಸಂದರ್ಭ ಜಾಸ್ತಿ. ಮೊದಲೇ ತಿಳಿಸಿರುವಂತೆ ಈ ಕ್ರಿಮಿಗಳು ಮಿದುಳು ಮತ್ತು ಬಳ್ಳಿಯನ್ನು ಆಕ್ರಮಿಸುತ್ತವೆ. ಮುಖ್ಯವಾಗಿ ಇವು ಸ್ನಾಯುಗಳ ಚಲನೆ ಸಂಬಂಧಿಸಿದ ನರಕೋಶಗಳನ್ನು ಆಕ್ರಮಿಸಿ ಅವನ್ನು ನಾಶಪಡಿಸುತ್ತವೆ. ಕೆಲವು ನರಕೋಶಗಳು ಸ್ವಲ್ಪ ಪರಿವರ್ತನೆಗೀಡಾದರೆ ಇನ್ನು ಕೆಲವು ಸಂಪೂರ್ಣ ನಶಿಸಿಯೆ ಹೋಗಬಹುದು. ಕೆಲವು ಹಾನಿಗೀಡಾದ ನರಕೋಶಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲೂಬಹುದು.

ಲಕ್ಷಣಗಳು: ರೋಗ ಸಾಮಾನ್ಯವಾಗಿ 6 ತಿಂಗಳಿಗಿಂತ ಮೇಲಿನ ಮತ್ತು 3 ವರ್ಷಗಳ ಒಳಗಿನ ವಯಸ್ಸಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ. 6 ತಿಂಗಳಿಂದ ಬಲುಪಾಲು ಮಕ್ಕಳಲ್ಲಿ ರೋಗ ಕ್ರಿಮಿಗಳು ಬರೀ ಲಘುರೋಗವನ್ನು ಉಂಟು ಮಾಡಬಹುದು. ಅದು ಲಕ್ಷ್ಯಕ್ಕೆ ಬರದೇ ಹೋಗಬಹುದು. ತೀವ್ರ ರೋಗದಲ್ಲಿ ಲಕ್ವಪೂರ್ವರೋಗ, ಲಕ್ವಯುಕ್ತರೋಗ ಎಂಬ ಎರಡು ಬಗೆಗಳಿವೆ.
ಲಕ್ವಪೂರ್ವರೋಗ ಪೋಲಿಯೊ ಖಾಯಿಲೆಗಳಲ್ಲಿ ಮೊದಲ ಹಂತದಲ್ಲಿ ರೋಗಿಗೆ ಜ್ವರ ತಲೆನೋವು, ವಾಂತಿ, ಕತ್ತು ಮತ್ತು ಬೆನ್ನಿನ ಸಿಡಿತ, ಕೈಕಾಲು ನೋವು ಕಾಣಿಸಿಕೊಳ್ಳುತ್ತವೆ. ಇದು 7-10 ದಿನಗಳಲ್ಲಿ ಶಾಶ್ವತ ಊನವೇನನ್ನೂ ಉಂಟು ಮಾಡದೇ ವಾಸಿಯಾಗುತ್ತದೆ.

ಲಕ್ವಯುಕ್ತ ಕಾಯಿಲೆಯಲ್ಲಿ ಆರಂಭದ 2-3 ದಿನಗಳಲ್ಲಿಯೇ ದೇಹದ ಅಂಗೋಪಾಂಗಳಲ್ಲಿ ಪೂರ್ಣ ಶಕ್ತಿಹೀನತೆ ಉಂಟಾಗುತ್ತದೆ. ಪಾಶ್ರ್ವವಾಯು ಒಂದೇ ಕಾಲು, ಕೈ ಅಥವಾ ಎರಡೂ ಕಾಲು ಅಥವಾ ಕೈಗಳಿಗೂ ಬರಬಹುದು. ಆದರೆ ಒಂದು ವೈಶಿಷ್ಟ್ಯವೆಂದರೆ ಕೈ ಮತ್ತು ಕಾಲುಗಳ ಲಕ್ವದಲ್ಲಿ ಅಸಮಾನತೆಯಿರುತ್ತದೆ. ಯಾವುದಾದರೂ ಒಂದು ಭಾಗ ತೀವ್ರವಾಗಿ ಬಲಹೀನವಾಗುವುದು. ಇದಲ್ಲದೆ ಹೊಟ್ಟೆಯ ಹಾಗೂ ಎದೆಯ ಸ್ನಾಯುಗಳ ಬಲಹೀನತೆ ತೋರಬಹುದು. ಹೊಟ್ಟೆಯ ಮಾಂಸಖಂಡಗಳ ದುರ್ಬಲತೆಯಿಂದ ಹೊಟ್ಟೆಯೊಳಗಿನ ಅಂಗಗಳು ಆ ಭಾಗದ ಹೊಟ್ಟೆಯನ್ನು ಮುಂದಕ್ಕೆ ತಳ್ಳಬಹುದು. ಇದಕ್ಕೆ ಫ್ಯಾಂಟಮ್ ಹರ್ನಿಯ ಎಂದು ಹೆಸರು.
ಎದೆಯ ಸ್ನಾಯುಗಳ ಹಾಗೂ ವಪೆಯ ಬಲಹೀನತೆಯಿಂದ ರೋಗಿಗೆ ಉಸಿರಾಡಲು ತೊಂದರೆಯಾಗುವುದು. ಸಣ್ಣ ಮಿದುಳಿನ ನರಕೋಶಗಳ ಹಾನಿಯಿಂದ ಜೀವಕ್ಕೆ ಅಪಾಯಸ್ಥಿತಿ ಉಂಟಾಗಬಹುದು. ಈ ಭಾಗದಲ್ಲಿ ಉಸಿರಾಟ ಕೇಂದ್ರ, ರಕ್ತ ಪರಿಚಲನಕೇಂದ್ರ ಮತ್ತು ಹಲವು ನರಕೇಂದ್ರಗಳಿವೆ. ಇದರಿಂದ ಉಸಿರಾಟದ ತೊಂದರೆ ಮತ್ತು ರಕ್ತ ಒತ್ತಡದ ವೈಪರೀತ್ಯಗಳು ಉಂಟಾಗಬಹುದು. ಅಲ್ಲದೆ ರೋಗಿಗೆ ನುಂಗಲು, ಕೆಮ್ಮಲು ಕಷ್ಟವಾಗಬಹುದು. ಕೆಲವೊಮ್ಮೆ ನೀರು ಕುಡಿದಾಗ ಮೂಗಿನಲ್ಲಿ ಬರುವುದುಂಟು. ಧ್ವನಿನಾಳಗಳ ಬಲಹೀನತೆಯಿಂದ ಗೊಗ್ಗರುದನಿ, ಪಕ್ಕೆ ಎಳೆತ ಹಾಗೂ ಉಸಿರಾಟಕ್ಕೆ ಅಡಚಣೆ ಉಂಟಾಗಬಹುದು. ಈ ವಿಧದ ಚಿಹ್ನೆಗಳು ತಲೆದೋರಿದಲ್ಲಿ ಅದಕ್ಕೆ ಬಲ್ಬಾರ್ ಪೋಲಿಯೊ ಎಂದು ಹೆಸರು. ಇದೊಂದು ಅತ್ಯಂತ ತುರ್ತಾಗಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ.
ಕೆಲವು ಪೋಲಿಯೊ ರೋಗ ಮಿದುಳನ್ನು ಆಕ್ರಮಿಸಿ ಉರಿಯೂತ ಉಂಟು ಮಾಡಬಹುದು. ಇಂಥ ಪರಿಸ್ಥಿತಿಯಲ್ಲಿ ಜೀವಕ್ಕೆ ಅಪಾಯವಾಗುವ ಸಂಭವವಿದೆ.

ಚಿಕಿತ್ಸೆ: ಈ ರೋಗದಿಂದ ನರಳುತ್ತಿರುವ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನಡೆಸಬೇಕು. ಮಗುವಿಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಶಕ್ತಿಗುಂದಿದ ಕೈ ಅಥವಾ ಕಾಲುಗಳು ಸೊಟ್ಟಾಗದಂತೆ ಅವನ್ನು ತಟಸ್ಥ ಸ್ಥಿತಿಯಲ್ಲಿ ಇಡಬೇಕು. ಮಂಡಿಯ ಭಾಗದಲ್ಲಿ ತುಸು ಬಗ್ಗಿದಂತೆ ಪಾದ ನೆಟ್ಟಗಿರಬೇಕು. ವಿಶೇಷ ಪಟ್ಟಿಗಳ ಮೂಲಕ ಈ ತಟಸ್ಥ ಸ್ಥಿತಿಗಳನ್ನು ಕಾಯ್ದುಕೊಳ್ಳಬೇಕು. ಆರಂಭದ ಹಂತದಲ್ಲಿ ಇರುವ ಸ್ನಾಯುನೋವುಗಳು ಇದರ ನಿವಾರಣೆಗಾಗಿ ಬಿಸಿ ನೀರಿನಿಂದ ಶಾಖ ಹಾಗೂ ನೋವು ಶಮನಕಾರಕ ಔಷಧಿಗಳನ್ನು ಬಳಸಬೇಕು. ಜ್ವರವಿಳಿದು ಸ್ನಾಯುಗಳ ನೋವು ಕಡಿಮೆಯಾದ ಬಳಿಕ ದುರ್ಬಲಗೊಂಡಿರುವ ಮಾಂಸಖಂಡಗಳನ್ನು ಕಾಯಚಿಕಿತ್ಸೆಗೆ ಒಳಪಡಿಸಬೇಕು. ಇಂಥ ವಿಶೇಷ ಚಿಕಿತ್ಸೆಗಳನ್ನು ತಿಂಗಳುಗಟ್ಟಲೆ ನಡೆಸಬೇಕಾದೀತು. ಇದರಲ್ಲಿ ವೈದ್ಯರ, ಹೆತ್ತವರ ಹಾಗೂ ರೋಗಿಯ ಸಕ್ರಿಯ ಪಾತ್ರ ಅಗತ್ಯ. ಸಾಮಾನ್ಯವಾಗಿ 4- ವಾರಗಳೊಳಗೆ ಶಕ್ತಿ ಮರುಕಳಿಸುತ್ತದೆ. ದೇಹಸ್ಥಿತಿ ಗಂಭೀರವಾಗಿರುವ ರೋಗಿಯನ್ನು ನಾಜೂಕಾಗಿ ಆರೈಕೆ ಮಾಡಬೇಕು.

ನುಂಗುವುದು ಅತಿಕಷ್ಟವಾಗಿರುವ ರೋಗಿಗಳನ್ನು ತಲೆಭಾಗ ಕೆಳಮಟ್ಟದಲ್ಲಿ ಇರುವಂತೆ ಮಲಗಿಸಬೇಕು. ಗಂಟಲಿನಲ್ಲಿರಬೇಕಾದ ಎಂಜಲು, ಸ್ರಾವ ಮುಂತಾದವನ್ನು ಆಗಾಗ ನಳಿಕೆಯ ಮೂಲಕ ಹೀರಿ ತೆಗೆಯಬೇಕು. ಆಹಾರ ಪದಾರ್ಥಗಳನ್ನು ಜಠರನಳಿಕೆಯ ಮೂಲಕ ಊಡಬೇಕು. ಈ ವಿಧದ ಆರೈಕೆಯಿಂದ ರೋಗಿಗಳು 2-3 ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಉಸಿರಾಟಕ್ಕೆ ಅಡಚಣೆಯಿದ್ದಾಗ ಶ್ವಾಸನಾಳ ಛೇದನ ಮಾಡಿ ನಳಿಕೆಯಿಟ್ಟು ಅದರಲ್ಲಿ ರೋಗಿ ಉಸಿರಾಡುವಂತೆ ಮಾಡಬಹುದು. ಕೆಲವೊಮ್ಮೆ ಕೃತಕ ಉಸಿರಾಟದ ಅವಶ್ಯಕತೆ ತಲೆದೋರಬಹುದು. ಉಸಿರಾಟ ಮತ್ತು ನುಂಗಲು ತೊಂದರೆ ಎರಡೂ ಇರುವ ರೋಗಿಗಳ ಚಿಕಿತ್ಸೆ ಕಷ್ಟಕರ. ಆದರೆ ಇತ್ತೀಚೆಗೆ ಇಂಥವರ ಚಿಕಿತ್ಸೆಗೆ ವಿಶಿಷ್ಟ ಕೃತಕ ಶ್ವಾಸಶೋಧಕ ಸಲಕರಣೆಗಳನ್ನು ಉಪಜ್ಞಿಸಲಾಗಿದೆ.

ಪ್ರತಿಬಂಧಕ ಮಾರ್ಗಗಳು:	 ಮಕ್ಕಳಿಗೆ ಲಸಿಕೆ ನೀಡುವುದರ ಮೂಲಕ ಪೋಲಿಯೋವನ್ನು ತಡೆಗಟ್ಟಬಹುದು. ಎರಡು ವಿಧದ ಲಸಿಕೆಗಳು ಬಳಕೆಯಲ್ಲಿವೆ. 

ಮೌಖಿಕ ಲಸಿಕೆ: ಇದನ್ನು ಸ್ಯಾಬಿನ್ ಎಂಬ ರಷ್ಯಾದೇಶದ ವಿe್ಞÁನಿ ಶೋಧಿಸಿದ. ಇದರಲ್ಲಿ ಜೀವಂತ ಆದರೆ ದುರ್ಬಲಗೊಳಿಸಲ್ಪಟ್ಟ ಪೋಲಿಯೊ ಜೀವಾಣುಗಳಿವೆ. ಇದನ್ನು ಮಗುವಿಗೆ 3 ತಿಂಗಳು ಆದಾಗ, ತಿಂಗಳಿಗೊಮ್ಮೆ 3 ಬಾರಿಯೂ ಒಂದು ವರ್ಷದ ಬಳಿಕ ಇನ್ನೊಮ್ಮೆಯೂ ನೀಡುತ್ತಾರೆ.

ಚುಚ್ಚುಮದ್ದುಲಸಿಕೆ: ಕೊಲ್ಲಲ್ಪಟ್ಟ ಪೋಲಿಯೊ ಜೀವಾಣುಗಳಿಂದ ತಯಾರಿಸಿದ ಸಾಕ್ ಲಸಿಕೆ. ಇದರ ಬಳಕೆ ಈಗ ಬಲು ಕಡಿಮೆ. ಇದನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡುತ್ತಾರೆ.

ಕುಟಿಲ ವಾತ, ಮೆತುಮೂಳೆರೋಗ: ಬೆಳೆಯುತ್ತಿರುವ ಮಕ್ಕಳ ಮೂಳೆಗಳಲ್ಲಿ ಕ್ಯಾಲ್ಸಿಯಮ್ ಖನಿಜ ಸರಿಯಾಗಿ ನ್ಯಾಸವಾಗದಿರುವುದಕ್ಕೆ (ಮಿನರಲೈಸೇಶನ್) ಮೆತುಮೂಳೆ ರೋಗ ಎಂದು ಹೆಸರು. ಕ್ಯಾಲ್ಸಿಯಮ್ ಕರುಳಿನಿಂದ ಹೀರಲ್ಪಡುವುದಕ್ಕೂ ಮೂಳೆಗಳಲ್ಲಿ ನ್ಯಾಸವಾಗುವುದಕ್ಕೂ ಡಿ ಜೀವಸತ್ತ್ವ ಅತ್ಯಗತ್ಯ. ಕ್ಯಾಲ್ಸಿಯಮ್, ರಂಜಕ, ಇಲ್ಲವೇ ಡಿ ಜೀವಸತ್ತ್ವದ ಕೊರತೆಯಿಂದ ಈ ರೋಗ ಕಾಣಬರುತ್ತದೆ. ಸಾಮಾನ್ಯವಾಗಿ ಕಾಡುವುದು ಡಿ ಜೀವಸತ್ತ್ವ ಕೊರತೆಯ ಮೆತುಮೂಳೆರೋಗ.

ಜೀವಸತ್ತ್ವ ಡಿ ಕೊರತೆಯ ರೋಗ: ವ್ಯಕ್ತಿಯ ಕ್ಷಿಪ್ರ ಬೆಳೆವಣಿಗೆಯ ಹಂತಗಳಲ್ಲಿ (ಅಂದರೆ ಅಪಕ್ವ ಶಿಶುಗಳಲ್ಲಿ ಶೈಶವಾವಸ್ಥೆಯಲ್ಲಿ ಅಥವಾ 10-12 ವಯೋಮಾನದವರಲ್ಲಿ) ತೋರಿಬರುವುದು. ಒಮ್ಮೊಮ್ಮೆ ಗರ್ಭಿಣಿಯರಲ್ಲೂ ಕಾಣಿಸಿಕೊಳ್ಳುವುದುಂಟು. 3-4 ತಿಂಗಳೊಳಗಿನ ಶಿಶುಗಳಲ್ಲಿ ರೋಗದ ಮುಖ್ಯ ಲಕ್ಷಣ ಸೆಳವು. ಇದನ್ನು ತಗ್ಗಿದ ಕ್ಯಾಲ್ಸಿಯಮ್ಮಿನ ಸೆಳವು ಎನ್ನುವರು. ಮಗುವಿನ ತಲೆಯ ಮೂಳೆ ಮೆತ್ತಗಿದ್ದು ಒತ್ತಿದಾಗ ಪಿಂಗ್‍ಪಾಂಗ್ ಚಂಡಿನಂತೆ ಭಾಸವಾಗುತ್ತದೆ.

6  ತಿಂಗಳ ಮೇಲಿನ ಮಕ್ಕಳಲ್ಲಿ ತಲೆಯ ಭಾಗ ದಪ್ಪಗಿದ್ದು ಬೆವರು ಸುರಿಯುತ್ತಿರುತ್ತದೆ.	 ಮಗುವಿನ ಬೆಳವಣಿಗೆ ಹಿಂದುಳಿಯುತ್ತದೆ. ಅಂತೆಯೇ ಮಗು ಕೂರುವುದು ನಿಲ್ಲುವುದು ನಡೆಯುವುದು ಎಲ್ಲ ತಡವಾಗುತ್ತವೆ. ಹಲ್ಲುಗಳು ನಿಧಾನವಾಗಿ ಹುಟ್ಟುತ್ತವೆ. ಈ ಮಕ್ಕಳಲ್ಲಿ ಕೈ ಮತ್ತು ಕಾಲಿನ ಮಣಿಕಟ್ಟುಗಳು ಅಗಲವಾಗಿದ್ದು ಗಂಟು ಗಂಟಾಗಿರುತ್ತವೆ. ಎದೆಯ ಎಲುಬು ಮತ್ತು ಪಕ್ಕೆಲುಬುಗಳು ಸೇರುವ ಜಾಗ ಗಂಟಾಗಿದ್ದು ಎದ್ದು ಕಾಣಿಸುತ್ತಿರುತ್ತವೆ. ಅವು ಸಾಲಾಗಿ ಜಪಮಣಿ ಸರದಂತೆ ಎದೆಯ ಮೇಲೆ ಕಾಣಿಸುತ್ತವೆ. ಕುಳಿತಾಗ ಬೆನ್ನೆಲುಬು ಬಿಲ್ಲಿನಂತೆ ಬಾಗುತ್ತದೆ. ಹೊಟ್ಟೆ ಮಡಕೆಯಂತೆ ಉಬ್ಬರಿಸಿರುತ್ತದೆ. ಮಗು ಅಂಬೆಗಾಲಿಟ್ಟು ಸರಿದಾಡುವಂತಾದಾಗ ಕೈ ಕಾಲಿನ ಉದ್ದನೆಯ ಮೂಳೆ ಮೊಣಕಾಲು ದೇಹದ ಭಾರಕ್ಕೆ ಜಗ್ಗಿಬಿಡುತ್ತವೆ. ಚಿಕಿತ್ಸೆ ಇಲ್ಲದೇ ಹೋದಲ್ಲಿ ಮೊಣಕಾಲು ಊದಿಕೊಂಡು ನಡೆಯುವಾಗ ಒಂದಕ್ಕೊಂದು ತಗಲುವುದರಿಂದ ಚಲನೆಗೆ ತೊಂದರೆಯಾಗುತ್ತದೆ. ಸ್ನಾಯುಗಳು ಕ್ಷೀಣವಾಗಿದ್ದು ಬಲಹೀನವಾಗಿರುತ್ತವೆ.
ಚಿಕಿತ್ಸೆ: 	ಜೀವಸತ್ತ್ವ ಡಿ ಕಾಲ್ಸಿಯಮ್ ಕೊರತೆಯಿಂದ 4 ತಿಂಗಳ ಕೆಳಗಿನ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಸೆಳವಿನ ಕಾಯಿಲೆಗೆ ಕ್ಯಾಲ್ಸಿಯಮನ್ನು ರಕ್ತನಾಳದ ಮೂಲಕ ನೀಡಬೇಕು. ಬಾಯಿಯ ಮೂಲಕವೂ ನೀಡಬಹುದು. 6 ತಿಂಗಳ ಮೇಲಿನ ಮಕ್ಕಳಿಗೆ 6,00,000 IU ಜೀವಸತ್ತ್ವವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಬೇಕು. ಇದರ ಬದಲು 5000 IU ನಷ್ಟು ಡಿ ಜೀವಸತ್ತ್ವವನ್ನು ಪ್ರತಿದಿನವೂ ಬಾಯಿಮೂಲಕ ಸುಮಾರು 4-6 ವಾರ ನೀಡಬಹುದು.

ರಂಜಕದ ಕೊರತೆಯಿಂದ ಕಾಣಬರುವ ಮತ್ತು ಮೂಳೆ ರೋಗಕ್ಕೆ ಈ ಖನಿಜವನ್ನು ದಿನಕ್ಕೆ 1-3 ಗ್ರಾಮಿನಷ್ಟು ಕೊಡಬೇಕು. ರಕ್ತದಲ್ಲಿ ಕ್ಯಾಲ್ಸಿಯಮ್ ಕಡಿಮೆ ಇದ್ದರೆ, ರಂಜಕದ ಜೊತೆಯಲ್ಲಿ ಡಿ ಜೀವಸತ್ತ್ವವನ್ನು 40,000 IUನಷ್ಟು ಅಥವಾ ಕ್ಯಾಲ್‍ಸಿಡ್ರಾಲನ್ನು ನೀಡಬೇಕು. ಜೀವಸತ್ತ್ವ ಡಿ ಕೊರತೆಯಿಂದ ತಲೆದೋರುವ ಮೆತುಮೂಳೆ ರೋಗವನ್ನು ಮಕ್ಕಳಿಗೆ ಹುಟ್ಟಿದಾಗಿನಿಂ 800-400 IUನಷ್ಟು ಡಿ ಜೀವಸತ್ತ್ವವನ್ನು ಆಹಾರದ ಜೊತೆ ಕೊಡುವುದರಿಂದ ತಡೆಗಟ್ಟಬಹುದು. ಮಕ್ಕಳನ್ನು ಸಾಕಷ್ಟು ಕಾಲ ಎಳೆಬಿಸಿಲಿನಲ್ಲಿ ಆಡಲು ಬಿಡುವುದರಿಂದಲೂ ಇದನ್ನು ತಡೆಗಟ್ಟಬಹುದು. ಕೆಲವು ಭಾಗಗಳಲ್ಲಿ ಬಾಣಂತಿ ಮತ್ತು ಶಿಶುಗಳನ್ನು ಕತ್ತಲೆ ಕೋಣೆಯಲ್ಲಿ ಮಲಗಿಸುವ ರೂಢಿ ಇದೆ. ಇದರಿಂದ ತಾಯಿ ಹಾಗೂ ಮಗು ಸೂರ್ಯನ ಬೆಳಕಿನಿಂದ ವಂಚಿತರಾಗುತ್ತಾರೆ. ಇಂಥ ಪದ್ಧತಿಗಳು ಸಮಾಜದಲ್ಲಿ ಮೆತುಮೂಳೆ ರೋಗದ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿವೆ. ಜನಸಾಮಾನ್ಯರಿಗೆ ಈ ಬಗ್ಗೆ ಸಾಕಷ್ಟು ತಿಳಿವಳಿಕೆ ನೀಡುವುದು ಅತ್ಯಗತ್ಯ.										(ಸಿ.ಎಸ್.ಕೆ.)

	ಶಸ್ತ್ರಚಿಕಿತ್ಸಾಯೋಗ್ಯ ಮಕ್ಕಳರೋಗಗಳು: ಮಕ್ಕಳಲ್ಲಿ ಕಂಡುಬರುವ ಆಜನ್ಮ ಮತ್ತು ವಂಶಗಳ ವಿಕಲತೆ ನ್ಯೂನತೆ ವೈಪರೀತ್ಯಗಳು ಮತ್ತು ಗಂತಿಗಳು ಬಹಳವಾಗಿಯೇ ಇವೆ. ಇವುಗಳಲ್ಲಿ ಅನೇಕವು ಶಸ್ತ್ರಕ್ರಿಯೆಯಿಂದ ಚಿಕಿತ್ಸಿಸಬಹುವಾದವು. ಅಂಥವಲ್ಲಿ ಮುಖ್ಯವಾದ ಕೆಲವನ್ನು ಈ ಕೆಳಗೆ ವಿವರಿಸಿದೆ.

	ಅನ್ನಮಾರ್ಗದ ರೋಗಗಳು, ಊನತೆ ವಿಕಲತೆಗಳು ಬಹಳವಾಗಿಯೇ ಇರುತ್ತವೆ: 

	ಅನ್ನನಾಳ ಶ್ವಾಸನಾಳಸಂಪರ್ಕ (ಈಸೊಫೇಜಿಯೊ ಟ್ರೇಕಿಯಲ್ ಫಿಶ್ಚುಲ): ಮೂರನೆಯ ಬೆನ್ನುಮೂಳೆಯ ನೇರದಲ್ಲಿ ಅನ್ನನಾಳವನ್ನೂ ಶ್ವಾಸನಾಳವನ್ನೂ ಕೂಡಿಸುವ ಕಂಡಿ ಇರಬಹುದು. ಇಂಥ ಸ್ಥಿತಿಯಲ್ಲಿ ಮಗುವಿನ ಮೂಗು ಬಾಯಿಗಳಿಂದ ನೊರೆ ಒಸರುತ್ತಿರುತ್ತವೆ. ಹಾಲುಣಿಸಿದರೆ ಅದೂ ನೊರೆನೊರೆಯಾಗಿ ಹೊರಬರುತ್ತದೆ. ಉಣಿಸಿದ ಹಾಲು ಶ್ವಾಸಕೋಶಕ್ಕೆ ಹೋಗಿ ತುಂಬಿಕೊಂಡು ಮಗು ಉಸಿರಾಡುವುದಕ್ಕೂ ತೊಂದರೆ ಆಗಬಹುದು. ಶಸ್ತ್ರಕ್ರಿಯೆಯಿಂದ ದುರಸ್ತಿಸಾಧ್ಯ. ಕಠಿಣಶಸ್ತ್ರಕ್ರಿಯೆಯಿಂದ ಸಂಪರ್ಕವನ್ನು ಮುಚ್ಚಿ ಅನ್ನನಾಳ ಶ್ವಾಸನಾಳಗಳೆರಡನ್ನೂ ದುರಸ್ತಿ ಮಾಡಬೇಕಾಗುತ್ತದೆ. ಹಾಗೆ ಮಾಡಿದರೂ ಸುಮಾರು 30% ಮಕ್ಕಳು ಸಾಯುತ್ತವೆ.

	ಜಠರ ಕರುಳುಗಳ ನಡುವೆ ಇರುವ ದ್ವಾರ ಕುಂಠಿತವಾಗಿರಬಹುದು. ಇದು ವಂಶಗತವಾಗಿದ್ದು ಸಾಮಾನ್ಯವಾಗಿ ಮೊದಲ ಗಂಡುಮಗುವಿನಲ್ಲಿ ಕಾಣಬರುತ್ತದೆ. ಇತರ ಮಕ್ಕಳಲ್ಲಿ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಅಪರೂಪ. ಈ ಸ್ಥಿತಿಗೆ ಕಂಜೆನಿಟಲ್ ಹೈಪರ್‍ಟ್ರೋಫಿಕ್ ಪೈಲೋರಿಕ್ ಸ್ಟಿನೋಸಿಸ್ ಎಂದು ಹೆಸರು ದ್ವಾರಕುಂಠಿತವಾಗಿರುವುದಕ್ಕೆ ಈ ಸ್ಥಳದಲ್ಲಿರುವ ಉಂಗುರಸ್ನಾಯುವಿನ (ಸ್ಪಿಂಕ್ಟರ್) ಅತಿವೃದ್ಧಿ (ಹೈಪರ್‍ಟ್ರೋಫಿ) ಕಾರಣ. ಮಗು ಹುಟ್ಟಿದ 3-4 ವಾರಗಳ ಅನಂತರ ಈ ಸ್ಥಿತಿ ವ್ಯಕ್ತವಾಗುತ್ತದೆ. ಮಗುವಿಗೆ ಕುಡಿಸಿದ ಹಾಲು ದಕ್ಕದೆ ಅದು ಹೊಟ್ಟೆಯಿಂದ ರೇಚಿಸಲ್ಪಟ್ಟಂತೆ ವಮನವಾಗುವುದು. ಇದರ ಲಕ್ಷಣ. ಮೇಲುಹೊಟ್ಟೆಯಲ್ಲಿ ಸಣ್ಣ ಚೆಂಡಿನಂತೆ ಉರುಳುವ ಜಠರತರಂಗವನ್ನೂ (ಪೆರಿಸ್ಟಾಲ್‍ಸಿಸ್) ನೋಡಬಹುದು. 4-8 ದಿನಗಳಿಗೆ ಒಮ್ಮೆ ಗಟ್ಟೆಯಾಗಿ ಹಿಕ್ಕೆಯಂತೆ ಮಲವಿಸರ್ಜಿತವಾಗುತ್ತದೆ. ದೇಹದ ಜಲ ಮತ್ತು ಲವಣಪ್ರಮಾಣಗಳು ವಮನದಿಂದಾಗಿ ಬಲುಕಡಿಮೆ ಆಗಿ ಮಗು ಕೃಶವಾಗುತ್ತದೆ. ಶಸ್ತ್ರ ಕ್ರಿಯೆಯಿಂದ ಉಂಗುರಸ್ನಾಯುವನ್ನು ಛೇದಿಸಿ ಇದನ್ನು ಚಿಕಿತ್ಸಿಸಬಹುದು.

	ಭ್ರೂಣದ ಬೆಳೆವಣಿಗೆ ಕಾಲದಲ್ಲಿ 7ನೆಯ ವಾರದಿಂದ 10ನೆಯ ವಾರದ ತನಕ ಸಣ್ಣದಾಗಿಯೇ ಇರುವ ಉದರವನ್ನು ಹೆಚ್ಚು ಕಡಿಮೆ ಭರ್ತಿಯಾಗಿ ಯಕೃತ್ತು ಆವರಿಸಿಕೊಂಡಿರುತ್ತದೆ. ಆದ್ದರಿಂದ ಭ್ರೂಣದ ಅನ್ನಮಾರ್ಗದ ನಡುಭಾಗಕ್ಕೆ (ಮಿಡ್‍ಗಟ್) ಸ್ಥಳ ಸಂಕೋಚವಾಗಿ ಅದು ನಾಭಿನಾಳದ (ಯೂರೇಕಸ್) ಒಳಗೆ ತೂರಿ ಅದರಿಂದ ಹೊರಚ್ಚಾಗಿಯೇ ಇರುತ್ತದೆ. ಭ್ರೂಣದ ಉದರ ಕ್ರಮೇಣ ದೊಡ್ಡವಾದಂತೆ ಅನ್ನಮಾರ್ಗ ಒಳಕ್ಕೆ ಜಾರಿಕೊಂಡು ಉದರದ ಒಳಗೇ ನೆಲಸುತ್ತದೆ. ಹೀಗಾಗದೆ ನ್ಯೂನತೆ ಕಂಡುಬಂದರೆ ನಾಭಿಪ್ರದೇಶದಲ್ಲಿ ಆಜನ್ಮ ಅಂತ್ರವೃದ್ಧಿ (ಹರ್ನಿಯ) ಕಂಡು ಬರುತ್ತದೆ. ಅಂತ್ರವೃದ್ಧಿಯ ಚೀಲದಲ್ಲಿ ಯಕೃತ್ತಿನ ಹಾಲೆ, ಮೂತ್ರಪಿಂಡ ಇವೂ ಇರಬಹುದು. ಅಂತ್ರವೃದ್ಧಿ ಚೀಲದ ಭಿತ್ತಿ ಬಲುತೆಳುವಾಗಿದ್ದು ಹರಿದುಹೋಗಿ ಚೀಲದ ಒಳಗಿದ್ದ ಅಂಗಗಳು ಹೊರಕ್ಕೆ ಬಂದು ಬಿಡಬಹುದು. ಇದಕ್ಕೆ ಎಕ್ಸಾಂಫೋಲಾಸ್ ಎಂದು ಹೆಸರು. ಇದು ತುರ್ತು ಪರಿಸ್ಥಿತಿಯಾಗಿದ್ದು ತತ್‍ಕ್ಷಣ ಅಂಗಗಳನ್ನು ಉದರದ ಒಳಕ್ಕೆ ತೂರಿ ಶಸ್ತ್ರಕ್ರಿಯೆಯಿಂದ ಛಿದ್ರತೆಯನ್ನು ಸರಿಪಡಿಸಬೇಕು. ಇದು ಸಾಧ್ಯವಿಲ್ಲದಿದ್ದಾಗ ಚೀಲ ಹರಿದಿರುವ ಸ್ಥಳವನ್ನು ಬೇರೆಕಡೆಯಿಂದ ತೆಗೆದುಕೊಂಡ ಚರ್ಮದಿಂದಲೋ ಸೈಲಾಸ್ಟಿಕ್ ಪೊರೆಯಿಂದಲೋ ಕವುಚಿ ಅಂಗಗಳನ್ನು ಒಳತಳ್ಳಿ ದುರಸ್ತಿ ಮಾಡಬೇಕಾಗುತ್ತದೆ.

	ಭ್ರೂಣದ ಅನ್ನಮಾರ್ಗದ ಎಲ್ಲಾದರೂ ಸುಂಡಿಹೋಗಿ ರಜ್ಜಿನಂತಾಗಿರುವುದುಂಟು. ಇದಕ್ಕೆ ಅಟ್ರೀಸಿಯ ಆಫ್ ಮಿಡ್‍ಗಟ್ ಎಂದು ಹೆಸರು.

	ಮುಂಗರುಳಿದ ಭಾಗ ಸುಂಡಿಹೋಗಿದ್ದರೆ ಮಗುವಿಗೆ ಉಣಿಸಿದಹಾಲು ದಕ್ಕದೆ ವಮನವಾಗುತ್ತದೆ. ಇದರಲ್ಲಿ ಪಿತ್ತರಸ ಇರುವುದು ಸಾಮಾನ್ಯ. ಹೊಟ್ಟೆ ಉಬ್ಬರ ಇರುವುದಿಲ್ಲ. ಮಲವಿಸರ್ಜನೆಯೂ ಆಗುವುದಿಲ್ಲ. ವಮನದಿಂದ ದೇಹದ ಜಲ ಮತ್ತು ಲವಣ ನಷ್ಟವಾಗಿ ಮರಣ ಸಂಭವಿಸುತ್ತದೆ. ಅಪರೂಪವಾಗಿ ನಡುಗರುಳು ಭಾಗ ಇಲ್ಲವೇ ದೊಡ್ಡಕರುಳು ಸುಂಡಿರಬಹುದು. ಇಂಥ ಮಕ್ಕಳಲ್ಲಿ ಶಿಶುಮಲ (ಮೆಕೋನಿಯಮ್) ವಿಸರ್ಜಿತವಾಗುವುದಿಲ್ಲ. ಹುಟ್ಟಿದ ಮೂರನೆಯ ದಿನವೇ ಹೊಟ್ಟೆ ಉಬ್ಬರಿಸಿಕೊಂಡು ವಮನವಾಗುತ್ತದೆ. ಈ ವಿಕಲತೆಗಳು ವಂಶಗತವಾಗಿ ಕಂಡುಬರಬಹುದು. ಅಂಥ ಮಕ್ಕಳು ಮಂಗೋಲಿಯನ್ನರ ಮುಖಲಕ್ಷಣ ಪಡೆದಿರುತ್ತಾರೆ. ನಡು ಅನ್ನಮಾರ್ಗ ಸುಂಡಿರುವ ಸಂದರ್ಭದಲ್ಲಿ ತಾಯಿಯ ಗರ್ಭಚೀಲದಲ್ಲಿ ಅಧಿಕ ದ್ರವವಿದ್ದು ಆಕೆಯ ಉದರ ಬಲುದೊಡ್ಡದಾಗಿ ಉಬ್ಬಿರುವುದೂ ಉಂಟು. ಈ ಸ್ಥಿತಿಗೆ ಹೈಡ್ರಾಮ್ನಿಯಾಸ್ ಎಂದು ಹೆಸರು.

	ಮೇಲೆ ವಿವರಿಸಿದ ಸ್ಥಿತಿಗಳಿಗೆ ಶಸ್ತ್ರಕ್ರಿಯೆಯಿಂದ ಶಿಶುವಿನ ಉದರ ಛೇದಿಸಿ ಸುಂಡಿರುವ ಕರುಳುಭಾಗ ತೆಗೆದುಹಾಕಿ ಕತ್ತರಿಸಿರುವ ಕರುಳಿನ ಎರಡು ತುದಿಗಳನ್ನೂ ಸೇರಿಸಿ ಹೊಲಿಯುವುದೇ ಚಿಕಿತ್ಸೆ.

	ಇದೇ ಭಾಗದ ತಿರುಚು (ಮಿಡ್‍ಗಟ್ ವಾಲ್‍ವ್ಯುಲಸ್): ಮುಂಗರುಳು (ಡುಯೋಡೀನಮ್) ಅಂಧಾಂತ್ರಕ್ಕೆ (ಸೀಕಮ್) ಒಂದು ಪಟ್ಟಿಯಂಥ ರಚನೆಯಿಂದ ಬಂಧಿತವಾಗಿದ್ದು ಪಟ್ಟಿಯ ಎರಡು ಬಂಧನಗಳ ಮಧ್ಯೆ ಇರುವ ಕರುಳು ಭಾಗ ಪ್ರದಕ್ಷಿಣವಾಗಿ ತಿರುಚಿಕೊಳ್ಳಬಹುದು. ತಾನಾಗಿಯೇ ತಿರುಚುಬಿಟ್ಟುಕೊಳ್ಳಲೂಬಹುದು. ತಿರುಚಿಕೊಂಡಿರುವಾಗ ಹಸುರು ವಮನ, ಸ್ವಲ್ಪಹೊಟ್ಟೆ ಉಬ್ಬರ, ಮಲಬದ್ಧತೆ ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಬಹಳಷ್ಟು ಶಿಶುಗಳಲ್ಲಿ ಇಂಥ ತಿರುಚಿನಿಂದ ತೀವ್ರ ಪರಿಣಾಮಗಳು ಆಗುವುದಿದೆ. ತಿರುಚಿನಲ್ಲಿ ರಕ್ತನಾಳಗಳು ಸಿಕ್ಕಿ ಕುಂಠಿತಗೊಂಡು ಕರುಳಿನ ಆ ಭಾಗಕ್ಕೆ ರಕ್ತದೊರೆಯದಂತಾಗುತ್ತದೆ. ಇದು ತುರ್ತು ಪರಿಸ್ಥಿತಿ. ಪುನಃ ಮಗು ಆಘಾತಗೊಂಡಿರುತ್ತದಲ್ಲದೆ ಮರಣವೂ ಸಂಭವಿಸಬಹುದು. ತತ್‍ಕ್ಷಣ ಉದರ ಕೊಯ್ದು ಕರುಳನ್ನು ಅಪ್ರದಕ್ಷಿಣವಾಗಿ ತಿರುಚಿ ಸರಿಪಡಿಸಬೇಕು ಮತ್ತು ತಿರುಚಿಕೊಳ್ಳಬಹುದಾದಂತೆ ಮಾಡುವ ಬಂಧನ ಪಟ್ಟಿಯನ್ನು ಕತ್ತರಿಸಬೇಕು. ರಕ್ತಪೂರೈಕೆ ನಿಂತುಹೋದದ್ದರಿಂದ ಕರುಳು ಆಗಲೇ ಮೃತವಾಗಿದ್ದರೆ ಅದನ್ನು ತೆಗೆದುಹಾಕಬೇಕು. ಶಸ್ತ್ರಚಿಕಿತ್ಸೆಯನ್ನು ಕೈಗೊಂಡರೂ ಮಗುವನ್ನು ಬದುಕಿಸಬಹುದಾದ ಸಂಭವ ಹೆಚ್ಚಾಗಿರುವುದಿಲ್ಲ.

	ಅಂತ್ರಾಂತ್ರ ಸ್ಥಿತಿ (ಇನ್‍ಟಸ್‍ಸಸ್ಪೆನ್ಷನ್): ಒಮ್ಮೊಮ್ಮೆ ಕರುಳಿನ ಒಂದು ಭಾಗ ಅದರ ಮುಂದಿನ ಭಾಗಕ್ಕೆ ದೂರದರ್ಶಕ ಕೊಳವೆಯಂತೆ ನುಗ್ಗಿ ಕರುಳು ಮಾರ್ಗದಲ್ಲಿ ಅಡಚಣೆ ಉಂಟುಮಾಡುತ್ತದೆ. ಮಕ್ಕಳಲ್ಲಿ ಹೀಗಾಗಿದ್ದಾಗ ಅವು ಇದ್ದಕ್ಕಿದ್ದಂತೆ ಬಿಟ್ಟು ಬಿಟ್ಟು ಕಿರುಚುತ್ತವೆ. ಮಧ್ಯೆ ಮಧ್ಯೆ ಆರಾಮವಾಗಿ ಹಾಲು ಕುಡಿಯುವುದೂ ಉಂಟು. ಕುಡಿದಹಾಲು ವಮನವಾಗಿಬಿಡುವುದು ಸಾಮಾನ್ಯ. ಮಲವಿಸರ್ಜನೆ ಆಗದೆ ಅದರ ಬದಲು ಆಮು (ಲೋಳೆ) ರಕ್ತ ಹೋಗಬಹುದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯ. ಇಲ್ಲದಿದ್ದರೆ ಒಳಹೊಕ್ಕ ಕರುಳುಭಾಗ ಕೊಳೆತು ವ್ಯಕ್ತಿಯ ಮರಣಕ್ಕೆ ಕಾರಣವಾಗಬಹುದು. ಬೇರಿಯಮ್ ಪಿಚಕಾರಿಯಿಂದ ಇಲ್ಲವೇ ಶಸ್ತ್ರಕ್ರಿಯೆಯಿಂದ ಹೊಟ್ಟೆ ಕೊಯ್ದು ಅಂತ್ರಾಂತ್ರವಾಗಿರುವ ಭಾಗವನ್ನು ಹಸುವಿನ ಮೊಲೆಯಿಂದ ಹಾಲು ಕರೆಯುವಂತೆ ಕೈ ಆಡಿಸುತ್ತ ಬಿಡಿಸಬೇಕು.

	ಶಿಶುಮಲಕೃತ ಅಂತ್ರಾವರೋಧ (ಮೆಕೋನಿಯಮ್ ಐಲಿಯಸ್) ಎಂಬುದು ಒಂದು ವಿಚಿತ್ರ ಶಿಶುರೋಗ. ಇದರಲ್ಲಿ ಕರುಳಿನ ಜೊತೆಗೆ ಇನ್ನೂ ಅನೇಕ ಅಂಗಗಳು ರೋಗಗ್ರಸ್ತವಾಗಿರುತ್ತವೆ. ಕರುಳಿನಲ್ಲಿ ಮಾಮೂಲು ಕರುಳುರಸದ ಬದಲು ಗಟ್ಟಿಯಾದ ಗೋಂದಿನಂಥ ಅಂಟುಲೋಳೆ ಸ್ರವಿಸಲ್ಪಡುತ್ತದೆ. ಮೇದೋಜೀರಕಾಂಗ ಅಲ್ಲಲ್ಲಿ ನಾರುಗಟ್ಟಿರುವುದಲ್ಲದೆ ಕೆಲವು ಕಡೆಗಳಲ್ಲಿ ಪೊರೆ ಕೋಶಗಳೂ ಕಂಡುಬರುತ್ತವೆ. ಮೇದೋಜೀರಕ ರಸದ ಉತ್ಪತ್ತಿಯೇ ಆಗುವುದಿಲ್ಲ. ಹೀಗಾಗಿ ಕುಡಿದ ಹಾಲು ಸರಿಯಾಗಿ ಜೀರ್ಣವಾಗದೆ ಕರುಳಿನ ಅಂಟುಲೋಳೆಯೊಡನೆ ಮಿಶ್ರವಾಗಿ ಸಂಚಯಿಸಿ ಕರುಳಿನಲ್ಲಿ ಅಡಚಣೆ ಮಾಡುತ್ತದೆ. ಶ್ವಾಸನಾಳದಲ್ಲೂ ಅಂಟುಲೋಳೆ ಉತ್ಪತ್ತಿಯಾಗಿ ಸಂಚಯಿಸಿ ಉಸಿರುಮಾರ್ಗದಲ್ಲಿ ಅಡಚಣೆ ಉಂಟು ಮಾಡುವುದರಿಂದ ಉಸಿರಾಟಕ್ಕೂ ತೊಂದರೆ ಆಗಬಹುದು. ಬೆವರು ಗ್ರಂಥಿಗಳು ಸ್ರವಿಸುವ ಬೆವರಿನಲ್ಲಿ ಅತ್ಯಧಿಕಪ್ರಮಾಣದಲ್ಲಿ ಸೋಡಿಯಮ್ ಕ್ಲೋರೈಡ್ ವಿಸರ್ಜಿತವಾಗುತ್ತದೆ. ಚಿಕಿತ್ಸಾಕ್ರಮವಾಗಿ ಶಸ್ತ್ರಕ್ರಿಯೆಯಿಂದ ಕರುಳಿನ ಕೊನೆ ಭಾಗವನ್ನೂ ತೆಗೆದುಹಾಕಿ ಉಳಿದದ್ದನ್ನು ಸರಿಪಡಿಸಬೇಕು. ಮೇದೋಜೀರಕ ರಸವನ್ನು ಔಷಧಿಯಾಗಿ ಕೊಡಬೇಕು. ಕರುಳಿನಲ್ಲಿ ಸಂಚಯಿಸುವ ಅಂಟುಲೋಳೆಯನ್ನು ಅಸಿಟೈಲ್‍ಸಿಸ್‍ಟೀನ್ ಎಂಬ ದ್ರಾವಣದಿಂದ ತೊಳೆದು ಸ್ವಚ್ಛ ಮಾಡಬೇಕು. ಆದ್ದರಿಂದ ಅನೇಕ ವೇಳೆ ಚಿಕಿತ್ಸೆಯನ್ನು ಎರಡು ಹಂತಗಳಲ್ಲಿ ಮಾಡಬೇಕಾಗಿ ಬರಬಹುದು.

	ಹರ್ಷ್‍ಸ್ಪ್ರಿಂಗ್ ರೋಗ: S ಆಕಾರದ ದೊಡ್ಡ ಕರುಳುಭಾಗ (ಸಿಗ್‍ಮಾಯ್ಡ್ ಕೋಲನ್) ಮತ್ತು ಮಲಾಶಯಗಳಲ್ಲಿ ಆಂತರಿಕ ನರಕೋಶಗಳು ಮತ್ತು ಜಾಲ (ಇನ್‍ಟೆನ್ಸಿಕ್‍ನರ್ವ್) ಆಜನ್ಮವಾಗಿ ಲೋಪವಾಗಿರುವುದರಿಂದ ಈ ರೋಗ ಉಂಟಾಗುತ್ತದೆ. ಮಲವಿಸರ್ಜನೆ 4-8 ದಿನಗಳಿಗೊಮ್ಮೆ ಆಗುವುದು ಈ ಸ್ಥಿತಿಯ ವೈಶಿಷ್ಟ್ಯ. ವಮನವೂ ಆಗಾಗ್ಗೆ ಆಗುತ್ತಿರಬಹುದು. ಹೊಟ್ಟೆ ಉಬ್ಬರ, ಅಜೀರ್ಣ ಮುಂತಾದವು ಸಾಮಾನ್ಯ. ಆದ್ದರಿಂದ ಸೇವಿಸಿದ ಆಹಾರ ಮೈಹತ್ತದೆ ಮೂಳೆ ಚಕ್ಕಳವಾಗಿರಬಹುದು. ಕರುಳಿನ ಈ ಭಾಗಗಳಲ್ಲಿ ಚಲನೆಯೂ ನಾಶವಾಗಿರುವುದರಿಂದ ಮಲ ಅಲ್ಲಿಂದ ಮುಂದೆ ಸಾಗದೆ ಅಲ್ಲೆ ಸಂಚಯವಾಗುತ್ತದೆ. ಇದರಿಂದ ಕರುಳು ಉಬ್ಬಿದಂತೆ ಕಾಣುತ್ತದೆ. ಭೇದಿ ಔಷಧಿ ಕೊಟ್ಟಾಗ ಮಲವಿಸರ್ಜನೆ ಆಗಿ ಆ ತರುಣದಲ್ಲಿ ಮಗು ಆರಾಮವಾಗಿರಬಹುದು. ಚಿಕಿತ್ಸೆಗಾಗಿ ರೋಗಗ್ರಸ್ತ ಕರುಳು ಭಾಗವನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಿ ಕಡಿದ ಕರುಳು ಕೊನೆಗಳನ್ನು ಜಂಟಿಸಿ ಹೊಲಿಯಬಹುದು. ಇದನ್ನು ಅನೇಕ ವೇಳೆ ಎರಡು ಮೂರು ಹಂತಗಳಲ್ಲಿ ಮಾಡಬೇಕಾಗಿಬರಬಹುದು.

	ಆಸನದ್ವಾರ ಲೋಪಸ್ಥಿತಿ (ಇಂಪರ್‍ಫೊರೇಟೆಡ್ ಏನಸ್): ಶ್ರೋಣಿಯಲ್ಲಿ ಮಲಾಶಯಕ್ಕೆ ಅಂಟಿರುವ ಮತ್ತು ಅದರ ಮೇಲೆ ವರ್ತಿಸುವ ಲಿವೇಟರ್ ಏನೈ ಎಂಬ ಸ್ನಾಯು ಇದೆ. ಮಲಾಶಯ ಇದರ ಮೂಲಕ ಮುಂದುವರಿದು ಆಸನನಾಳವಾಗಿ ಆಸನದ್ವಾರದ ಮೂಲಕ ಹೊರಕ್ಕೆ ತೆರೆದುಕೊಳ್ಳವುದು ಮಾಮೂಲುಸ್ಥಿತಿ. ಆದರೆ ಹೀಗಾಗದೆ ಆಸನನಾಳ ಸ್ನಾಯು ಇರುವ ಮಟ್ಟಕ್ಕೆ ಮೇಲೆ ಇಲ್ಲವೇ ಅದೇ ಸಮನಾಗಿ ಅಥವಾ ಅದನ್ನು ತೂರಿ ಅದಕ್ಕಿಂತ ಕೆಳಮಟ್ಟದಲ್ಲಿ ಕುರುಡಾಗಿ ಕೊನೆಗೊಳ್ಳುವುದು ಈ ಸ್ಥಿತಿಯ ವೈಶಿಷ್ಟ್ಯ. ಮೂರು ಸ್ಥಿತಿಗಳಲ್ಲೂ ಆಸನದ್ವಾರ ಕಾಣಬರದೆ ಅದು ಇರಬೇಕಾಗಿದ್ದ ಸ್ಥಳದಲ್ಲಿ ಗುಳಿ ಬಿದ್ದಂತಿರುತ್ತದೆ. ಅನೇಕ ವೇಳೆ ಅದು ಮೂತ್ರಕೋಶಕ್ಕೂ ಅದರ ನಾಳಕ್ಕೂ ಹೆಣ್ಣು ಮಕ್ಕಳಲ್ಲಿ ಯೋನಿಯೊಳಕ್ಕೂ ತೆರೆದುಕೊಂಡಿರಬಹುದು. ಈ ಸ್ಥಿತಿ ಕಂಡುಬಂದಾಗ ಮಲವಸ್ತು ಮೂತ್ರದೊಡನೆಯೂ ಯೋನಿಯ ಮೂಲಕವೂ ಹೊರಬರುತ್ತದೆ. ನಾಳ ಕುರುಡಾಗಿಯೇ ಅಂತ್ಯವಾಗಿದ್ದರೆ ಹೊಟ್ಟೆ ಉಬ್ಬರಿಸಿರುತ್ತದೆ.

	ಆಸನನಾಳ ಸ್ನಾಯುವಿನ ನೇರದಲ್ಲಿ ಅಂತ್ಯವಾಗಿದ್ದಾಗ ಕುರುಡಾಗಿ ಕೊನೆಗೊಳ್ಳುವುದರಿಂದ ಮಲವಸ್ತುವಿನ ವಿಸರ್ಜನೆ ಆಗದೆ ಹೊಟ್ಟೆ ಬಹಳವಾಗಿ ಉಬ್ಬರಿಸಿಕೊಂಡಿದ್ದು ವಮನವೂ ಆಗುವುದಿದೆ. ಲಿವೇಟರ್ ಏನೈ ಸ್ನಾಯುವಿಗಿಂತಲೂ ಕೆಳಮಟ್ಟದಲ್ಲಿ ಆಸನನಾಳ ಅಂತ್ಯವಾಗಿದ್ದಾಗಲೂ ಹೀಗೆಯೇ ಈ ಎರಡು ಬಗೆಯ ನ್ಯೂನತೆಗಳಲ್ಲೂ ಶಸ್ತ್ರಕ್ರಿಯೆಯಿಂದ ಆಸನದ್ವಾರ ಸೃಷ್ಟಿಸಿ ಅದಕ್ಕೆ ಆಸನ ನಾಳ ಸೇರಿಸಿ ಹೊಲಿಯುತ್ತಾರೆ. ಹಾಗೆ ಮಾಡಿದ ಮೇಲೆ ಮಲವಿಸರ್ಜನೆ ನೈಸರ್ಗಿಕವಾಗಿಯೇ ಜರಗುತ್ತದೆ. ಮೊದಲ ಬಗೆಯ ನ್ಯೂನತೆಯಲ್ಲೂ ಇಂಥದೇ ಶಸ್ತ್ರಕ್ರಿಯೆ ಮಾಡಲಾಗುತ್ತದೆ. ಆದರೆ ಅನೇಕ ಮಕ್ಕಳಲ್ಲಿ ಮಲವಿಸರ್ಜನೆಯ ಸ್ವಾಧೀನ ಲಭಿಸುವುದೇ ಇಲ್ಲ.

	ಶಕೇರು ಇಬ್ಭಾಗವಾಗಿರುವಿಕೆ (ಸ್ಟೈನ ಬೈಪಿಡ್): ಕಶೇರು ಮಣಿಗಳ ಎಡಬಲ ಭಾಗಗಳಿಂದ ಹಿಂದಕ್ಕೆ ಚಾಚುಗಳಿದ್ದು ಅವೆರಡೂ ನಡುಮಧ್ಯೆ ಕೂಡಿಕೊಂಡು ಉಂಗುರವಾಗುವುದಷ್ಟೆ. ಒಂದು ಮೇಲೊಂದು ಕಶೇರು ಉಂಗುರಗಳಿದ್ದು ಅದೇ ಒಂದು ನಾಳದಂತಾಗಿ ಆ ನಾಳದಲ್ಲಿ ದ್ರವಯುಕ್ತ ಪೊರೆಯಿಂದ ಮುಚ್ಚಿದ ಮಿದುಳು ಬಳ್ಳಿ ಇರುವುದೂ ಸರಿಯಷ್ಟೆ. ಈ ಸ್ಥಿತಿಯ ಊನತೆಯೇ ಸ್ಟೈನ ಬೈಫಿಡಕ್ಕೆ ಕಾರಣ. ಕಶೇರು ಮಣಿಗಳ ಚಾಚುಗಳ ಹಿಂದೆ ಸೇರಿಕೊಳ್ಳದೆ ಉಂಗುರವಾಗದೆ ಇಬ್ಭಾಗವಾಗಿ ಬಿಟ್ಟುಕೊಂಡಿದ್ದು ಆ ಭಾಗದಲ್ಲಿ ಕಾಣಬರುವ ಮಿದುಳು ಬಳ್ಳಿ ಹೊರಚ್ಚಾಗಿರುತ್ತದೆ. ಈ ಸ್ಥಿತಿಗೆ ಮೈಯಲೋಸಿಲ್ ಎಂದು ಹೆಸರು. ಇದರಲ್ಲಿ ಮಿದುಳುಬಳ್ಳಿಯನ್ನು ಹೊದ್ದಿರುವ ಕೋಶದಂತಾಗಿ ದ್ರವತುಂಬಿಕೊಳ್ಳಬಹುದು ಮತ್ತು ದ್ರವಯುಕ್ತ ಕೋಶ ಹೊರಚಾಚಿದಂತಿರಬಹುದು. ಇದಕ್ಕೆ ಮೆನಿಂಗೋಸೀಲ್ ಎಂದು ಹೆಸರು. ಮಿದುಳುಬಳ್ಳಿ ಮತ್ತು ದ್ರವದ ಚೀಲಗಳೆರಡೂ ಹೊರಚಾಚಿಕೊಂಡಿದ್ದರೆ ಅದಕ್ಕೆ ಮೆನಿಂಗೋಮೈಯ ಲೋಸೀಲ್ ಎಂದು ಹೆಸರು.

	ಈ ಸ್ಥಿತಿಗಳು ಸಾಮಾನ್ಯವಾಗಿ ಕಿಬ್ಬದಿಯ ಕಶೇರುಕಗಳಲ್ಲಿ ಕಂಡುಬರುತ್ತವೆ. ಇಂಥ ನ್ಯೂನತೆಗಳುಳ್ಳ ಮಕ್ಕಳಲ್ಲಿ ಕಾಲುಗಳ ಮತ್ತು ಮಲಮೂತ್ರ ವಿಸರ್ಜನೆಯ ಸ್ವಾಧೀನ ತಪ್ಪಿಹೋಗಿರುವುದು ಸಾಧಾರಣ. ಶಸ್ತ್ರಕ್ರಿಯೆಯಿಂದ ದುರಸ್ತಿಮಾಡಿದರೆ ಕೇವಲ ಶೇಕಡಾ 12ರಷ್ಟು ಮಕ್ಕಳಲ್ಲಿ ಅನುಕೂಲ ಕಂಡಿತು. ಕತ್ತಿನ ಮೇಲುಭಾಗದಲ್ಲಿ ಕಶೇರು ಚಾಚುಗಳು ಉಂಗುರವಾಗದೆ ಇಬ್ಭಾಗವಾಗಿಯೇ ಇದ್ದಾಗ ಅಲ್ಲಿ ಹೊರಚ್ಚಾದ ಮಿದುಳು ಭಾಗಗಳೇ ಕಂಡುಬರಬಹುದು. ಇದಕ್ಕೆ ಆಕ್ಸಿಪಿಟಲ್ ಎನ್‍ಕಿಫಲೋಸೀಲ್ ಎಂದು ಹೆಸರು. ಇದನ್ನು ಕೂಡ ಶಸ್ತ್ರಕ್ರಿಯೆಯಿಂದ ಸರಿಪಡಿಸಬಹುದು. ಆದರೆ ಮಕ್ಕಳು ಸಣ್ಣತಲೆಯವರೂ (ಮೈಕ್ರೊಕಿಪಾಲಿಕ್ಸ್) ಬುದ್ಧಿಹೀನರೂ (ಈಡಿಯಟ್ಸ್) ಆಗಿ ಉಳಿಯುವುದೇ ಸಾಮಾನ್ಯ. ಆದ್ದರಿಂದ ಗರ್ಭಸ್ಥಕಾಲದಲ್ಲಿ ಈ ಸ್ಥಿತಿಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆದಿವೆ. ಪತ್ತೆ ಆದರೆ ಗರ್ಭಪಾತಮಾಡಿಸಿ ಇಂಥ ಮಕ್ಕಳು ಹುಟ್ಟುವುದನ್ನು ತಪ್ಪಿಸಬಹುದು ಎನ್ನುವುದು ವ್ಯಕ್ತ.

	ದ್ರವತುಂಬಿದ ದಪ್ಪತಲೆ (ಹೈಡ್ರೊಕಿಫಾಲಸ್): ಭ್ರೂಣಮಿದುಳಿನ ಕುಹರಗಳಲ್ಲಿರುವ ದ್ರವದ ಪರಿಚಲನೆಗೆ ಅಡ್ಡಿ ಆಗಿದ್ದಾಗ ದ್ರವ 1ನೆಯ ಮತ್ತು 2ನೆಯ ಕುಹರಗಳಲ್ಲಿ ಸಂಚಯವಾಗಿ ಮಿದುಳನ್ನೂ ತಲೆಯನ್ನೂ ಹಿಗ್ಗಿಸುತ್ತದೆ. ಪಂಚಲನೆಯ ಅಡ್ಡಿಗೆ ಕಾರಣ ಜನ್ಮತಃ ನ್ಯೂನತೆ, ಮಿದುಳು ಕ್ಷಯ, ಉರಿಊತ, ಗಂತಿ ಇತ್ಯಾದಿ. ಮಗು ಹುಟ್ಟಿದಾಗ ತಲೆ ದಪ್ಪವಾಗಿಯೂ ಹಣೆ ಉಬ್ಬಿಯೂ ಇದ್ದು ಕಣ್ಣುಗಳು ಹೊರಚಾಚಿದಂತಿರುತ್ತವೆ. ಸಂಚಿತ ದ್ರವ ಮಿದುಳಿನ ಮೇಲೆ ಒತ್ತಡ ಉಂಟುಮಾಡುವುದರಿಂದ ಅದಕ್ಕೆ ಜಖಮ್ಮಾಗಿ ಪಕ್ಷಾಘಾತ ಕಂಡು ಬರಬಹುದು. ಅಷ್ಟರೊಳಗೆ ಒಂದು ಕೃತಕನಾಳದಿಂದ ಮಿದುಳುಕುಹರನ್ನು ಉದರಕ್ಕೊ ಶ್ವಾಸಕೋಶದ ಹೊರಪೊರೆ ಚೀಲಕ್ಕೊ ಬಲಹೃತ್ಕರ್ಣಕ್ಕೋ ಶಸ್ತ್ರಕ್ರಿಯೆಯಿಂದ ಸೇರಿಸಬೇಕು. ಹೀಗೆ ಮಾಡಿದರೆ ದ್ರವಸಂಚಯವಾಗುವುದು ತಪ್ಪಿ ಮಗು ಸಹಜವಾಗಿ ಬೆಳೆಯುವ ಸಂಭವವಿದೆ.

	ನರಕೋಶಾರ್ಬುದ (ನ್ಯೂರೊಬ್ಲ್ಯಾಸ್ಟೋಮ): ನರಗ್ರಂಥಿಗಳಲ್ಲಿ ಇಲ್ಲವೇ ಆಡ್ರೀನಲ್ ಗ್ರಂಥಿಯ ತಿರುಳಿನಲ್ಲಿ ಉದ್ಭವಿಸುವ ಮಾರಕವಾದ ಗೆಡ್ಡೆ. 2 ವರ್ಷಗಳಷ್ಟು ಕಿರಿಯ ವಯಸ್ಸಿನ ಮಗುವಿನಲ್ಲಿ ಕಂಡುಬರಬಹುದಾದರೂ 5-6 ವರ್ಷದ ಮಕ್ಕಳಲ್ಲಿ ಸಾಮಾನ್ಯ. ಮೊದಮೊದಲು ಕೈಗೂ ಗಡ್ಡೆ ಸಿಕ್ಕದಂತಿರುತ್ತದೆ. ಇದು ಏಡಿಗಂತಿಯೇ ಆಗಿದ್ದು ತಾಯಿಗಂತಿಯಿಂದ ಕೋಶಗಳು ವಲಸೆ ಹೋಗಿ ಕಣ್ಣಿನ ಹಿಂಭಾಗದಲ್ಲಿ (ರಿಟ್ರೊಬಲ್ಬಾರ್) ಇಲ್ಲವೇ ಯಕೃತ್ತಿನಲ್ಲಿ ನೆಲಸಿ ಅಲ್ಲಿ ಮರಿಗಂತಿಗಳನ್ನು ಉಂಟುಮಾಡಬಹುದು. ಹೀಗಾದಾಗ ಕಣ್ಣುಗುಡ್ಡೆ ಮುಂಚಾಚಿಕೊಳ್ಳುವುದು. ಯಕೃತ್ ವೃದ್ಧಿ ಮುಂತಾದ ಸ್ಥಿತಿಗಳಿಗೆ ಕಾರಣವಾಗುತ್ತದೆ. ಮೂಳೆ ಮತ್ತು ಶ್ವಾಸಕೋಶಗಳಲ್ಲೂ ಮರಿಗಂತಿಗಳು ಕಾಣಿಸಿಕೊಳ್ಳಬಹುದು. ಗಡ್ಡೆಯನ್ನು ಶಸ್ತ್ರಕ್ರಿಯೆಯಿಂದ ತೆಗೆಯುವುದು. ವಿಕಿರಣಕ್ಕೆ ಈಡುಮಾಡುವುದು ಮತ್ತು ಸೈಕ್ಲೊಪಾಸ್ ಫಮೈಡಿನಂಥ ಅರ್ಬುದಲಯಕ ಔಷಧಿಗಳನ್ನು ಕೊಡುವುದು ಇದಕ್ಕೆ ಚಿಕಿತ್ಸೆ. ಆದರೆ ಇದು ಅಷ್ಟೇನೂ ಆಶಾದಾಯಕವಲ್ಲ.

	ವಿಲ್ಮ್‍ಗಂತಿ: ಇದೂ ಒಂದು ಏಡಿಗಂತಿ. ಸಾಮಾನ್ಯವಾಗಿ ಮೂತ್ರಪಿಂಡದ ಒಳಗೆ ಅದರ ಅಗ್ರಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ನವಜಾತ ಶಿಶುವಿನಲ್ಲಿ ಕಾಣಬರಬಹುದಾದರೂ 3 ವರ್ಷದ ಮಕ್ಕಳಲ್ಲಿ ಸಾಮಾನ್ಯ. ಹೆಣ್ಣು ಮಕ್ಕಳಿಗಿಂತ ಗಂಡುಮಕ್ಕಳಲ್ಲಿ ಹೆಚ್ಚು. ಹೊಟ್ಟೆಯನ್ನು ಅವುಕಿನೋಡಿದರೆ ಗಡ್ಡೆ ಪತ್ತೆ ಆಗುವಂತಿರಬಹುದು. ನೋವೂ ಉಂಟಾಗಬಹುದು. ಶೇಕಡಾ 60 ಇಂಥ ರೋಗಿಷ್ಠ ಮಕ್ಕಳಲ್ಲಿ ರಕ್ತಮೂತ್ರ ವಿಸರ್ಜನೆಯಾಗುತ್ತದೆ. ಶ್ವಾಸಕೋಶ ಮತ್ತು ಯಕೃತ್ತಿನಲ್ಲಿ ಮರಿಗಂತಿಗಳು ಬಲು ಶೀಘ್ರವಾಗಿಯೇ ಕಾಣಿಸಿಕೊಳ್ಳುತ್ತವೆ. ಇಂಥ ಮಕ್ಕಳು ಬಲುಬೇಗ ರಕ್ತಹೀನವಾಗಿ ಕ್ಷೀಣಿಸುತ್ತವೆ. ಕೆಲವರಲ್ಲಿ ರಕ್ತದ ಒತ್ತಡ ಅಧಿಕವಾಗಿರಬಹುದು. ಶಸ್ತ್ರಕ್ರಿಯೆಯಿಂದ ಗಂತಿಯನ್ನು ತೆಗೆಯುವುದು, ವಿಕಿರಣಕ್ಕೆ ಒಡ್ಡುವುದು ಮತ್ತು ಆಕ್ಟಿನೋಮೈಸಿನ್ನಿನಂಥ ಕೋಶಲಯಕಗಳನ್ನು ಬಳಸುವುದು ಚಿಕಿತ್ಸೆ.

	ಸೇಕ್ರೊಕಾಕ್ಸಿಜಿಯಲ್ ಗಂತಿ: ಮಗುವಿಗೆ ಬಾಲವಿರಬಹುದಾದ ಸ್ಥಳದಲ್ಲಿ ಆಜನ್ಮವಾಗಿ ಕಾಣಬರುವ ಗಂತಿ. ಇದು ದ್ರವ ತುಂಬಿದ ಗಡ್ಡೆಯಾಗಿರಬಹುದು, ಗಡುಸಾದ ಗಡ್ಡೆಯಾಗಿರಬಹುದು, ಗಡ್ಡೆಯ ಒಳಗೆ ಕರುಳು ಮಿದುಳು ಕೈ ಮುಂತಾದ ಅಂಗಗಳು ಕಿರಿ ಆಕಾರವಾಗಿದ್ದು ತುಂಬಿಕೊಂಡಿರಬಹುದು. ಇಂಥ ಗಂತಿಗಳಿಗೆ ಟೆರ್ರಟೋಮಗಳೆಂದು ಹೆಸರು. ಇವುಗಳಲ್ಲಿ ಶೇಕಡಾ 30ರಷ್ಟು ಗಂತಿಗಳು ಅರ್ಬುದಸ್ವರೂಪದವಾಗಿದ್ದು ತ್ವರಿತವಾಗಿ ವೃದ್ಧಿಯಾಗುವುದಿದೆ. ಚಿಕಿತ್ಸೆಗಾಗಿ ಶಸ್ತ್ರಕ್ರಿಯೆಯಿಂದ ಗಡ್ಡೆಯನ್ನು ಬೆನ್ನುಮೂಳೆಯ ಅಂತ್ಯಭಾಗದ (ಕಾಕ್ಸಿಕ್ಸ್) ಜೊತೆಗೆ ತೆಗೆದುಹಾಕಬೇಕು.

	ಸ್ಟರ್ನೊಮ್ಯಾಸ್‍ಟಾಯ್ಡ್ ಗಂತಿ: ಕೆಳಗೆ ಎದೆ ಮೂಳೆಯ (ಸ್ಟರ್ನಮ್) ಅಗ್ರಭಾಗಕ್ಕೂ ಮೇಲೆ ಕಿವಿಯ ಹಿಂಭಾಗದಲ್ಲಿರುವ ಮೂಳೆ (ಮ್ಯಾಸ್‍ಟಾಯ್ಡ್) ತುದಿಗೂ ಸೇರಿರುವ ಸ್ನಾಯುವಿನಲ್ಲಿ (ಸ್ಟರ್ನೋಮ್ಯಾಸ್ಟಾಯ್ಡ್) ಗಜ್ಜುಗದಷ್ಟು ದಪ್ಪವಾಗಿ ಗಟ್ಟಿಯಾಗಿ ಕಂಡುಬರುವ ಆಜನ್ಮಗಂತಿ. ಏಡಿಗಂತಿಯಾಗಿಲ್ಲದಿರುವುದರಿಂದ ಜೀವಕ್ಕೆ ಅಪಾಯವಿಲ್ಲ. ಕತ್ತನ್ನು ಒಂದು ಕಡೆ ತಿರುಗಿಸಿದಾಗ ಕತ್ತಿನ ಕೆಳಭಾಗದಲ್ಲಿ ಈ ಗಡ್ಡೆ ಕಾಣಿಸುತ್ತದೆ. ಚಿಕಿತ್ಸಿಸದೆ ಹಾಗೆಯೇ ಬಿಟ್ಟರೆ ಕತ್ತು ಸೊಟ್ಟಾಗಿ ಮುಖ ಇನ್ನೊಂದು ಕಡೆಗೆ ತಿರುಗಬಹುದು. ಮಗು ಹುಟ್ಟಿದಾಗಲೇ ಇದನ್ನು ಪತ್ತೆ ಮಾಡಿ ಅದರ ಕತ್ತನ್ನು ದಿನದಲ್ಲಿ ಅನೇಕಬಾರಿ ಇನ್ನೊಂದು ಕಡೆಗೆ ಹೊರಳಿಸುತ್ತಿದ್ದರೆ ಒಂದೆರಡು ತಿಂಗಳುಗಳಲ್ಲಿ ಗಡ್ಡೆ ಕರಗಿಹೋಗಬಹುದು. ಅದು ಹಾಗೆಯೇ ಉಳಿದರೆ ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾಗುತ್ತದೆ. 

	ಹೀಮ್ಯಾಂಜಿಯೋಮ: ಅಜನ್ಮವಾಗಿ ಕಾಣಿಸಿಕೊಳ್ಳುವಂಥ ರಕ್ತನಾಳಗಳ ಸಣ್ಣ ಗಂತಿಗಳು. ಅಪಧಮನಿ, ಅಭಿದಮನಿ ಲೋಮನಾಳಗಳಲ್ಲಿ ಯಾವುದರಲ್ಲಾದರೂ ಗಂತಿ ಉದ್ಭವಿಸಬಹುದು. ಏಡಿಗಂತಿಗಳಾಗಿಲ್ಲವಾದ್ದರಿಂದ ಸಾಮಾನ್ಯವಾಗಿ ಮಾರಕ ಸ್ಥಿತಿಗಳಲ್ಲ. ಎದೆ ಮುಖ ತುಟಿ ನಾಲಗೆ ಕಣ್ಣಿನರೆಪ್ಪೆ ಮತ್ತು ತಲೆ ಇಂಥ ಕಡೆಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಯಕೃತ್ತು, ಮಿದುಳು, ಕರುಳು ಮುಂತಾದ ಅಂಗಗಳಲ್ಲೂ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ಕರುಳಿನಲ್ಲಿದ್ದರೆ ಬಾಯಿ ಮೂಲಕ ಇಲ್ಲವೆ ಆಸನದ ಮೂಲಕ ರಕ್ತಸ್ರಾವವಾಗುವುದಿದೆ. ಮಿದುಳಿನಲ್ಲಿದ್ದರೆ ಮೊಲ್ಲಾಗರವನ್ನು ಉಂಟುಮಾಡಬಹುದು. ಶಸ್ತ್ರಕ್ರಿಯೆಯಿಂದ ನಿರ್ಮೂಲಮಾಡಬಹುದು. ವಿದ್ಯುತ್ತಿನಿಂದ ಸುಟ್ಟುಹಾಕುವುದು, ಜಡ್ಡುಗಟ್ಟಿಸುವ (ಸ್ಕ್ಲೀರೊಸಿಂಗ್) ದ್ರವಗಳನ್ನು ಸೂಜಿಮದ್ದಾಗಿ ಸ್ಥಳೀಯವಾಗಿ ಪ್ರಯೋಗಿಸುವುದು ಇಲ್ಲವೇ ಅತಿ ಶೈತ್ಯ ಪ್ರಯೋಗದಿಂದ ನಾಶಮಾಡುವುದು ಇದರ ಚಿಕಿತ್ಸೆ. 	    
(ಜಿಒ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ